ಇದ್ಲೂಡು ಕೆರೆ ಅಂಗಳಕ್ಕೆ ಕಟ್ಟಡ ತ್ಯಾಜ್ಯ

ಇದ್ಲೂಡು ಕೆರೆ ಅಂಗಳಕ್ಕೆ ಕಟ್ಟಡ ತ್ಯಾಜ್ಯ

ಇದ್ಲೂಡು ಕೆರೆ ಅಂಗಳಕ್ಕೆ ಕಟ್ಟಡ ತ್ಯಾಜ್ಯ

ಶಿಡ್ಲಘಟ್ಟ: ಕೆರೆಗಳು ಅಂತರ್ಜಲ ಮರುಪೂರಣದ ಪ್ರಮುಖ ಆಧಾರವಾಗಿದ್ದು, ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಆತಂಕವಿದೆ.

ತಾಲ್ಲೂಕಿನ ಇದ್ಲೂಡು ಕೆರೆಯ ಅಂಗಳಕ್ಕೆ ಮಣ್ಣು, ಹಳೆಯ ಕಟ್ಟಡಗಳ ತ್ಯಾಜ್ಯ ಸುರಿಯಲಾಗುತ್ತಿದೆ. ಕೆರೆಗೆ ನೀರು ಹರಿದುಬರಲು ನೆರವಾಗುವ ಫೀಡರ್ ಚಾನೆಲ್‌ಗಳನ್ನು ಮುಚ್ಚಲಾಗಿದೆ ಎಂಬ ಆರೋಪ ಸ್ಥಳೀಯರಲ್ಲಿ ಕಳವಳ ಮೂಡಿಸಿದೆ. ಕೆರೆಯ ಮೂಲ ಸ್ವರೂಪ ಉಳಿಸಿ, ಒತ್ತುವರಿ ಆರೋಪಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಎಪಿಎಂಸಿ ಮಾಜಿ ನಿರ್ದೇಶಕ ರಾಜೇಂದ್ರ ಕೆರೆಯ ಸ್ಥಿತಿಗತಿ ಕುರಿತು ಕಳವಳ ವ್ಯಕ್ತಪಡಿಸಿದ್ದು, ಸಾರ್ವಜನಿಕ ಆಸ್ತಿಯಾದ ಕೆರೆಗಳ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳು ಸಮರ್ಪಕವಾಗಿ ನಿರ್ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಅಂತರ್ಜಲ ವೃದ್ಧಿಗೆ ಕೆರೆಗಳೇ ಆಧಾರ: ಮಳೆ ನೀರನ್ನು ಸಂಗ್ರಹಿಸಿ ಭೂಮಿಯೊಳಗೆ ಇಂಗಿಸುವ ಕೆರೆಗಳು ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಸುಧಾರಿಸಲು ನೆರವಾಗುತ್ತವೆ. ಇದ್ಲೂಡು ಕೆರೆಯಲ್ಲಿ ನೀರು ಸಂಗ್ರಹವಾದರೆ ನಗರದ ಒಂದು ಭಾಗದ ಕೊಳವೆಬಾವಿಗಳ ಅಂತರ್ಜಲ ಮರುಪೂರಣಕ್ಕೂ ಅನುಕೂಲವಾಗಬಹುದು. ಆದರೆ, ಒಂದೆಡೆ ಕೆರೆಗಳನ್ನು ಹಾಳುಮಾಡುತ್ತಾ ಮತ್ತೊಂದೆಡೆ ನೀರಿನ ಅಭಾವದ ಬಗ್ಗೆ ಆತಂಕ ವ್ಯಕ್ತಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ರಾಜೇಂದ್ರ ಮುಂದಿಟ್ಟಿದ್ದಾರೆ.

ಕೆರೆಗಳ ಒತ್ತುವರಿ ತಡೆ, ಜಲಮೂಲಗಳ ಪುನರುಜ್ಜೀವನ ಹಾಗೂ ಮಳೆನೀರು ನೈಸರ್ಗಿಕವಾಗಿ ಹರಿದುಬರುವ ಮಾರ್ಗಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ಪರಿಸರ ಕಾಳಜಿಯುಳ್ಳವರ ಒತ್ತಾಯವಾಗಿದೆ.

ಫೀಡರ್ ಚಾನೆಲ್‌ಗಳಿಗೂ ಕುತ್ತು: ಇದ್ಲೂಡು ಕೆರೆಯ ಅಂಗಳಕ್ಕೆ ಮಣ್ಣು ಹಾಗೂ ಹಳೆಯ ಕಟ್ಟಡಗಳ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಆರೋಪಗಳ ನಡುವೆ, ಕೆರೆಯೊಳಗೆ ಜೆಸಿಬಿ ಯಂತ್ರ ಬಳಸಿ ಮಣ್ಣು ಅಗೆದು ಸಾಗಿಸುವ ಕೆಲಸವೂ ಅಕ್ರಮವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೆರೆ ಏರಿಯ ಮೇಲೂ ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿದೆ ಎನ್ನಲಾಗಿದ್ದು, ಕೆರೆಗೆ ನೀರು ಹರಿದುಬರಲು ನೆರವಾಗುವ ಫೀಡರ್ ಚಾನೆಲ್‌ಗಳು ಮುಚ್ಚಿಹೋಗಿವೆ. ಕೆರೆಯ ಸುತ್ತಲಿನ ಗಿಡಮರ ನಾಶವಾಗಿವೆ ಎಂಬ ಆರೋಪಗಳೂ ಕೇಳಿಬಂದಿವೆ.

ಸಾಮಾಜಿಕ ಅರಣ್ಯ ಇಲಾಖೆಯವರು ಕೆರೆಯ ಜಾಗದಲ್ಲಿ ಜಾಲಿ ಮರಗಳನ್ನು ನೆಟ್ಟಿರುವುದರಿಂದ ಕೆರೆಗೆ ಹಾನಿಯಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಈ ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕಿದೆ.

ಕೆರೆಯೊಳಗೆ ಮಣ್ಣು ತೆಗೆಯಲು ಅನುಮತಿ ಪಡೆಯಲಾಗಿದೆಯೇ, ಮಣ್ಣನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ, ಕೆರೆಯ ಮೂಲ ವಿಸ್ತೀರ್ಣ ಮತ್ತು ಜಲಸಂಗ್ರಹ ಸಾಮರ್ಥ್ಯದ ಮೇಲೆ ಇದರಿಂದ ಪರಿಣಾಮವಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

ಕೆರೆಯ ಅಧಿಕೃತ ಗಡಿ, ರಾಜಕಾಲುವೆ ಹಾಗೂ ಫೀಡರ್ ಚಾನೆಲ್‌ಗಳ ಸ್ಥಿತಿಗತಿಯನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ, ಅಕ್ರಮ ಚಟುವಟಿಕೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಒತ್ತುವರಿ ತಡೆಗೆ ಅಧಿಕಾರಿಗಳ ಸ್ಪಂದನ ಅಗತ್ಯ: ಕೆರೆಗಳ ಸಂರಕ್ಷಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂಬ ಆರೋಪದ ಬಗ್ಗೆಯೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ತಿಯಾದ ಕೆರೆಗಳ ರಕ್ಷಣೆಗೆ ನಾಗರಿಕರು ಮುಂದಾದಾಗ ಸಂಬಂಧಪಟ್ಟ ಇಲಾಖೆಗಳು ಜವಾಬ್ದಾರಿಯಿಂದ ಸ್ಪಂದಿಸಬೇಕು ಎಂಬುದು ಅವರ ಒತ್ತಾಯ.

ಕೆರೆಯ ಗಡಿ ಗುರುತಿಸುವುದು, ಒತ್ತುವರಿ ಆರೋಪಗಳ ಕುರಿತು ಪರಿಶೀಲನೆ ನಡೆಸುವುದು, ಅತಿಕ್ರಮಣ ದೃಢಪಟ್ಟಲ್ಲಿ ಕಾನೂನು ಪ್ರಕಾರ ತೆರವುಗೊಳಿಸುವುದು, ಫೀಡರ್ ಚಾನೆಲ್‌ಗಳನ್ನು ಪುನಃಸ್ಥಾಪಿಸುವುದು ಹಾಗೂ ಕೆರೆ ಅಂಗಳದಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯುವುದು ತುರ್ತು ಕ್ರಮಗಳಾಗಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ, ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ.

ಕೆರೆ ಉಳಿದರೆ ಜಲಭದ್ರತೆಗೆ ಬಲ: ಮಳೆನೀರು ಸಂಗ್ರಹಿಸುವ ಕೆರೆಗಳು ಮುಂದಿನ ಪೀಳಿಗೆಯ ಜಲಭದ್ರತೆಗೆ ಪ್ರಮುಖ ಆಧಾರ. ಇದ್ಲೂಡು ಕೆರೆಯ ಕುರಿತು ಕೇಳಿಬಂದಿರುವ ಒತ್ತುವರಿ ಮತ್ತು ತ್ಯಾಜ್ಯ ಸುರಿಯುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಕೆರೆಯ ಮೂಲ ಸ್ವರೂಪ ಹಾಗೂ ನೈಸರ್ಗಿಕ ಜಲಹರಿವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆರೋಪಗಳು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ನೀರಿನ ಅಭಾವಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ಜಲಮೂಲಗಳನ್ನು ಹುಡುಕುವುದರ ಜೊತೆಗೆ ಈಗಿರುವ ಕೆರೆಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಇದ್ಲೂಡು ಕೆರೆಯನ್ನು ಉಳಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲ ಉಳಿಸಿ

‘ಎಲ್ಲೆಡೆ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನು ಮನಗಂಡು ಮುಂದಾಲೋಚನೆಯಿಂದ ಕೆರೆ, ಕುಂಟೆಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಹೊಸ ಕೆರೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದರೂ, ಇರುವ ಕೆರೆಗಳನ್ನು ಹಾಳು ಮಾಡುವುದು ಭವಿಷ್ಯದ ಪೀಳಿಗೆಗೆ ಮಾಡಿದ ದ್ರೋಹವಾಗುತ್ತದೆ. ತಾಲ್ಲೂಕು, ಜಿಲ್ಲಾಡಳಿತಗಳು ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿಯನ್ನು ಕಾನೂನುಬದ್ಧವಾಗಿ ತಡೆಗಟ್ಟಬೇಕು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಆಗ್ರಹಿಸಿದರು.

‘ತಾಲ್ಲೂಕಿನ ಪ್ರತಿಯೊಂದು ಕೆರೆಯೂ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ. ದುರಾಸೆಯಿಂದ ಕೆರೆಗೆ ನೀರು ಹರಿದುಬರುವ ಜಾಗಗಳನ್ನು ಅತಿಕ್ರಮಣ ಮಾಡಲಾಗಿದೆ. ಕೆರೆಗಳನ್ನು ಎಲ್ಲ ಬಗೆಯ ತ್ಯಾಜ್ಯ ಸುರಿಯುವ ತಾಣಗಳೆಂಬಂತೆ ಬಳಸಲಾಗುತ್ತಿದೆ. ಆದರೆ, ನೀರಿನ ಕೊರತೆ ಎದುರಾದಾಗ ಮಾತ್ರ ಎಲ್ಲರನ್ನೂ ದೂಷಿಸಲಾಗುತ್ತದೆ. ಕೆರೆಗಳ ಒತ್ತುವರಿ ಮಾಡಿ, ಜಲಮೂಲಗಳಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರೈತ ಜಯಂತಿ ಗ್ರಾಮದ ನಾರಾಯಣಸ್ವಾಮಿ ಒತ್ತಾಯಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ