
ಶಿಸ್ತು ನಿಯಮ ಉಲ್ಲಂಘಿಸಿದ ಪಾವೆಲ್, ಶೆರ್ಫೇನ್‌ಗೆ ವಾಗ್ದಂಡನೆ
ನವದೆಹಲಿ (ಪಿಟಿಐ): ರಾಂಚಿಯಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶಿಸ್ತು ನಿಯಮ ಉಲ್ಲಂಘಿಸಿದ ವೆಸ್ಟ್ ಇಂಡೀಸ್ ತಂಡದ ರೋವ್‌ಮನ್ ಪಾವೆಲ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರಿಗೆ ಐಸಿಸಿಯು ಸೋಮವಾರ ವಾಗ್ದಂಡನೆ ವಿಧಿಸಿದೆ. ಅವರ ಶಿಸ್ತಿನ ಖಾತೆಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ಸಹ ಸೇರಿಸಿದೆ.
ಈ ಇಬ್ಬರು ಆಟಗಾರರು ಕಳೆದ 24 ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿಲ್ಲ.
ಪಾವೆಲ್ ಅವರು ಐಸಿಸಿ ಶಿಸ್ತು ಸಂಹಿತೆಯ 2.2ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ. ಮಯಂಕ್ ಯಾದವ್ ಎಸೆದ ಇನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಪಾವೆಲ್ ಅವರು ಬೌಲ್ಡ್ ಆದರು. ಅದರಿಂದ ಹತಾಶೆಗೊಳಗಾದ ವಿಂಡೀಸ್ ಬ್ಯಾಟರ್ ಚೆಂಡನ್ನು ಬ್ಯಾಟ್‌ನಿಂದ ಬಡಿದಿದ್ದರು.
ರುದರ್‌ಫೋರ್ಡ್ ಅವರು 13ನೇ ಓವರ್‌ನಲ್ಲಿ ನಮನ್ ಧೀರ್ ಅವರ ಎಸೆತವನ್ನು ವೈಡ್ ಎಂದು ಭಾವಿಸಿ ಸುಮ್ಮನಾದರು. ಆದರೆ, ಅಂಪೈರ್ ವೈಡ್ ನೀಡಲಿಲ್ಲ. ಇದರಿಂದ ಕೋಪಗೊಂಡ ಅವರು ಅಂಪೈರ್ ಕಡೆ ತಿರುಗಿ ಜೋರಾಗಿ ಕಿರುಚಿದ್ದರು. ಈ ವರ್ತನೆಯು ಐಸಿಸಿ ಶಿಸ್ತು ಸಂಹಿತೆಯ 2.8ನೇ ವಿಧಿಯನ್ನು ಉಲ್ಲಂಘಿಸಿದೆ. ಇಬ್ಬರೂ ಆಟಗಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.