
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾಕ್ಕೆ ಭಗವಂತ ಖೂಬಾ ಆಗ್ರಹ
ಬೀದರ್: ‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಅಮರ್ ಕುಮಾರ್ ಖಂಡ್ರೆ ಅವರನ್ನು ವಜಾಗೊಳಿಸಬೇಕು’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಅವರು ಆರ್‌ಬಿಐ ಗವರ್ನರ್‌ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಎರಡೂವರೆ ವರ್ಷಗಳಿಂದ ಬೀದರ್ ಜಿಲ್ಲೆಯ ಸಹಕಾರ ಇಲಾಖೆಗೆ, ರೈತರಿಗೆ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ, ಸ್ವ-ಸಹಾಯ ಸಂಘಗಳಿಗೆ, ಕಾರ್ಮಿಕರಿಗೆ ಅಮರ್ ಖಂಡ್ರೆ ಕಂಟಕವಾಗಿದ್ದಾರೆ ಎಂದು ಟೀಕಿಸಿದ್ದಾರೆ.
‘ಮೂರು ವರ್ಷಗಳ ಹಿಂದೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಈ ಚುನಾವಣೆಯೂ ಸಹಕಾರ ಮತ್ತು ಸಾಹುಕಾರ ಮಧ್ಯೆ ನಡೆಯುತ್ತಿದೆ. ಅಮರ್ ಖಂಡ್ರೆ ಸಾಹುಕಾರ್ ಇದ್ದಾರೆ. ಇವರು ಬಡ್ಡಿ ವ್ಯವಹಾರದವರಂತೆ ವರ್ತಿಸುತ್ತಾರೆ. ಯಾವುದೇ ಕಾರಣಕ್ಕೂ ಅಮರ್ ಖಂಡ್ರೆ ಪೆನಾಲ್‌ಗೆ ಮತ ನೀಡಬಾರದು. ಇವರ ಕೈಗೆ ಅಧಿಕಾರ ಹೋದರೆ ಡಿಸಿಸಿ ಬ್ಯಾಂಕ್ ಹಾಗೂ ಬಿಎಸ್‌ಎಸ್‌ಕೆ ಉಳಿಯುವುದಿಲ್ಲ ಎಂದು ಹೇಳಿದ್ದೆ. ಆ ಭವಿಷ್ಯ ಈಗ ನಿಜವಾಗುತ್ತಿದೆ’ ಎಂದಿದ್ದಾರೆ.
ಅಮರ್ ಖಂಡ್ರೆ ಅಧ್ಯಕ್ಷರಾದ ಮೇಲೆ ಬ್ಯಾಂಕಿನಿಂದ ರೈತರಿಗೆ, ಸ್ವ-ಸಹಾಯ ಸಂಘದವರಿಗೆ ಹೊಸ ಸಾಲ ಕೊಟ್ಟಿಲ್ಲ. ಈ ಅಧ್ಯಕ್ಷರು ಬಡ್ಡಿ ವ್ಯವಹಾರ ಮಾಡುವವರಂತೆ ಕೇವಲ ಸಾಲ ವಸೂಲಿ ಕೆಲಸಕ್ಕೆ ಮುಂದಾಗಿದ್ದಾರೆ. ಜಿಲ್ಲೆಯ ಸಹಕಾರ ರಂಗಕ್ಕೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಇವರಿಂದ ಮುಕ್ತಿ ಸಿಗಬೇಕಾಗಿದೆ ಎಂದು ಹೇಳಿದ್ದಾರೆ.
‘ರೈತರ ಜೀವನಾಡಿಯಾಗಿರುವ ಬಿಎಸ್ಎಸ್‌ಕೆಯಿಂದ ರಾಜಕೀಯವಾಗಿ ಬೆಳೆದ ಖಂಡ್ರೆ ಪರಿವಾರ, ಇಂದು ಸಾಲದ ನೆಪವೊಡ್ಡಿ ಕಾರ್ಖಾನೆಯನ್ನು ನುಂಗಲು ಹೊಂಚು ಹಾಕುತ್ತಿದೆ. ಅವರ ಕುಟುಂಬದ ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ಮೇಲೂ ಅಸಲು, ಬಡ್ಡಿ ಸೇರಿ ಒಟ್ಟು ₹398 ಕೋಟಿ ಸಾಲವಿದೆ. ಇದರ ವಿರುದ್ದ ಯಾವುದೇ ಕ್ರಮವಾಗಿಲ್ಲ. ರೈತರ ಕಾರ್ಖಾನೆಯಾಗಿರುವ ಬಿಎಸ್ಎಸ್‌ಕೆ ಮೇಲೆ ಕ್ರಮಕ್ಕೆ ಮುಂದಾಗುತ್ತಿರುವುದು ಇವರ ಸ್ವಾರ್ಥ ಮತ್ತು ಅಹಂಕಾರದ ಪ್ರತೀಕ’ ಎಂದು ತಿಳಿಸಿದ್ದಾರೆ.
‘ರೈತರ ಹಿತವನ್ನು ನಿರ್ಲಕ್ಷಿಸಿರುವ ಈ ಖಂಡ್ರೆ ಪರಿವಾರವನ್ನು ಧಿಕ್ಕರಿಸಿ, ರೈತರ, ಸಹಕಾರಿ ಇಲಾಖೆಯ ಮತ್ತು ಸಕ್ಕರೆ ಕಾರ್ಖಾನೆಗಳ ಉಳಿವಿಗಾಗಿ ಅಮರ್ ಖಂಡ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸ್ವ-ಸಹಾಯ ಸಂಘದವರಿಗೆ ಅಮರ್ ಕುಮಾರ್ ಖಂಡ್ರೆಯವರ ಈ ದುರಾಡಳಿತದಿಂದ ಮುಕ್ತಿ ಸಿಗಬೇಕಾದರೆ ಇವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದು ಅವಶ್ಯಕ ಭಗವಂತ ಖೂಬಾ ಕೇಂದ್ರದ ಮಾಜಿ ಸಚಿವ