
ಆರ್ಚರಿಯ ಕಂಪೌಂಡ್ ವಿಭಾಗದಲ್ಲಿ ಭಾರತ ‘ಚಿನ್ನ’ದ ಶಿಕಾರಿ
ನಾಗೋಯಾ: ಬುಧವಾರ ಬೆಳಿಗ್ಗೆ ಕೇವಲ ಮೂರು ಗಂಟೆಗಳಲ್ಲಿ 3 ಚಿನ್ನದ ಪದಕಗಳು ಭಾರತದ ಖಾತೆ ಸೇರಿದವು.
20ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿಯ ಕಂಪೌಂಡ್ ವಿಭಾಗದಲ್ಲಿ ಮಹಿಳೆ, ಮಿಶ್ರ ಮತ್ತು ಪುರುಷ ತಂಡಗಳೂ ವಿಶ್ವದರ್ಜೆಯ ಪ್ರದರ್ಶನ ನೀಡಿದವು. ಒಂದರ ಹಿಂದೆ ಒಂದರಂತೆ ಬಂಗಾರ ಗೆದ್ದವು. ಹರ್ಷದ ಹೊನಲು ಹರಿಸಿದವು.
ಒಕಾಝಾಕಿ ಚಾವು ಸೊಗೊ ಪಾರ್ಕ್‌ನಲ್ಲಿ ಶುಭ್ರ ಆಗಸ ಮತ್ತು ಬಿಸಿಲಿನಲ್ಲಿ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ತಂಡವು ಮೊದಲಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಅಲ್ಲದೇ ವಿಶ್ವ ದಾಖಲೆಯನ್ನು ಸರಿಗಟ್ಟಿತು. ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತಾನಿಪರ್ತಿ ಮತ್ತು ಪ್ರೀತಿಕಾ ಪ್ರದೀಪ್ ಅವರ ತಂಡವು ಫೈನಲ್‌ನಲ್ಲಿ 238–234ರಿಂದ ಬಲಿಷ್ಠ ಚೀನಾ ತಂಡದ ಎದುರು ಮೇಲುಗೈ ಸಾಧಿಸಿತು.
ಭಾರತದ ವನಿತೆಯರು ಆರಂಭದಿಂದಲೇ ಪಾರಮ್ಯ ಮೆರೆದರು. 10 ರಿಂಗ್‌ನಲ್ಲಿ ಆರು ಸುತ್ತುಗಳಲ್ಲಿ ನಿಖರ ಗುರಿ ಸಾಧಿಸಿ ಪೂರ್ಣ 60 ಅಂಕ ಜೇಬಿಗಿಳಿಸಿದರು. ಹಾಲಿ ಚಾಂಪಿಯನ್ ತಂಡದ ಈ ಅಮೋಘ ಆರಂಭದಿಂದಾಗಿ ಚೀನಾದ ಅಗ್ರಶ್ರೇಯಾಂಕದ ಬಿಲ್ಲುಗಾರರು ತುಸು ಒತ್ತಡಕ್ಕೆ ಒಳಗಾದರು. ಯೂನಿಯರ್, ಯೂ ವಾಂಗ್ ಮತ್ತು ಫಂಗಾಯೊ ವೀ ಅವರು ಸೇರಿ ಮೊದಲ ಸುತ್ತಿನಲ್ಲಿ 58 ಅಂಕ ಪಡೆದರು. ನಂತರದ ಸುತ್ತುಗಳಲ್ಲಿ 58, 60 ಮತ್ತು 58 ಅಂಕ ಗಳಿಸಿದರು. ಒಟ್ಟು 234 ಅಂಕಗಳು ಖಾತೆ ಸೇರಿದವು.
ಅದೇ ಭಾರತದ ತಂಡವು 60, 59,59 ಹಾಗೂ 60 ಅಂಕ ಗಳಿಸಿದವು. 24 ಬಾಣಗಳ ಪ್ರಯೋಗದಲ್ಲಿ ಎರಡು 9 ಅಂಕಗಳ ರಿಂಗ್‌ನಲ್ಲಿ ಹೋಗಿ ನಾಟಿದವು. ಇನ್ನುಳಿದ 22 ಬಾಣಗಳು 10 ಅಂಕಗಳ ವರ್ತುಳಗಳಲ್ಲಿ ನಾಟಿಕೊಂಡವು. ಇದರೊಂದಿಗೆ 2014ರಲ್ಲಿ ದಕ್ಷಿಣ ಕೊರಿಯಾದ ದಾಖಲೆಯನ್ನು ಭಾರತ ತಂಡವು ಸಮಗಟ್ಟಿತು.
ಇದರ ನಂತರ ಮಿಶ್ರ ಕಂಪೌಂಡ್ ತಂಡ ವಿಭಾಗದಲ್ಲಿ ಚಿಕಿತಾ ತಾನಿಪರ್ತಿ ಮತ್ತು ಸಾಹಿಲ್ ರಾಜೇಶ್ ಜಾಧವ್ ಅವರು ದಕ್ಷಿಣ ಕೊರಿಯಾದ ಜಂಗಯೂನ್ ಪಾರ್ಕ್ ಮತ್ತು ಚೊಯ್ ಯುನ್ ಜಿಯು ತಂಡವನ್ನು ಮಣಿಸಿದರು.
ಈ ಹಣಾಹಣಿಯು 157ರಲ್ಲಿ ಟೈ ಆಗಿತ್ತು. ನಂತರ ನಾಲ್ಕು ಸೆಟ್ ಬಾಣಪ್ರಯೋಗದ ಸುತ್ತುಗಳಲ್ಲಿ ಚಿಕಿತಾ ಮತ್ತು ಸಾಹಿಲ್ ಅವರು ಕ್ರಮವಾಗಿ ಪೂರ್ಣ ಹತ್ತು ಅಂಕಗಳನ್ನು ಗಳಿಸಿದರು. ನಂತರ ಎದುರಾಳಿ ತಂಡದ ಪಾರ್ಕ್ 10 ಅಂಕ ಗಳಿಸಿದರೆ ಜಿಯು ಅವರಿಗೆ 9 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು.
ಇದರೊಂದಿಗೆ ಚಿಕಿತಾ ಮತ್ತು ಸಾಹಿಲ್ ಅವರು 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕೂಟಕ್ಕೆ ರಹದಾರಿ ಪಡೆದರು.
ಎರಡು ಚಿನ್ನದ ಪದಕಗಳ ಗೆಲುವು ಪುರುಷರ ಕಂಪೌಂಡ್ ತಂಡದಲ್ಲಿ ಹುಮ್ಮಸ್ಸು ಮೂಡಿಸಿತ್ತು. ಸಾಹಿಲ್ ಜಾಧವ್, ಕುಶಾಲ್ ದಲಾಲ್ ಮತ್ತು ಗಣೇಶ್ ಮಣಿ ರತ್ನಮ್ ತಿರುಮುರು ಅವರಿದ್ದ ತಂಡವು ಚಿನ್ನ ಗೆದ್ದು ಸಂಭ್ರಮಿಸಿತು. ‘
ಭಾರತ ತಂಡವು 238-237 ರಿಂದ ಚೀನಾದ ವಿರುದ್ಧ ರೋಚಕ ಜಯಸಾಧಿಸಿತು.