
ಹಳಿಯಾಳ: ಗೋವಿನ ಜೋಳ ಖರೀದಿ ಆರಂಭ, ಇಳುವರಿ ಕುಸಿತ
ಹಳಿಯಾಳ: ತಾಲ್ಲೂಕಿನಲ್ಲಿ ಆರಂಭದಲ್ಲಿ ಉತ್ತಮವಾಗಿ ಬೆಳೆದಿದ್ದ ಗೋವಿನಜೋಳ ಬೆಳೆಗೆ ನಂತರ ಮಳೆಯ ಕೊರತೆ ಎದುರಾದ ಪರಿಣಾಮ ಇಳುವರಿ ಕಡಿಮೆಯಾಗಿದೆ. ಆದರೂ ರೈತರು ಪ್ರತಿನಿತ್ಯ ಗೋವಿನಜೋಳವನ್ನು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರಾಟಕ್ಕೆ ತರುತ್ತಿದ್ದಾರೆ.
ತಾಲ್ಲೂಕಿನಲ್ಲಿ ಸುಮಾರು 3,400 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದ್ದು, ಸುಮಾರು 1.27 ಲಕ್ಷ ಕ್ವಿಂಟಲ್‌ಗೂ ಅಧಿಕ ಆವಕವಾಗುವ ನಿರೀಕ್ಷೆಯಿದೆ. ಸೆ.30ರ ವರೆಗೆ ಮಾರುಕಟ್ಟೆ ಪ್ರಾಂಗಣದಲ್ಲಿ 25 ಸಾವಿರಕ್ಕೂ ಅಧಿಕ ಕ್ವಿಂಟಲ್ ಗೋವಿನಜೋಳ ರೈತರಿಂದ ಆವಕವಾಗಿದೆ. ಸೆ.30ರಂದು ಗೋವಿನಜೋಳದ ಕನಿಷ್ಠ ದರ ₹2,335 ಹಾಗೂ ಗರಿಷ್ಠ ದರ ₹2,550 ಇತ್ತು.
ಕಳೆದ ವರ್ಷ ಮಾರುಕಟ್ಟೆ ಸಮಿತಿಯಲ್ಲಿ 2.14 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಆವಕವಾಗಿದ್ದು, ₹23.12 ಲಕ್ಷ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಅಂದಾಜು 1.27 ಲಕ್ಷ ಕ್ವಿಂಟಲ್ ಗೋವಿನಜೋಳ ಆವಕವಾಗುವ ಸಾಧ್ಯತೆಯಿದ್ದು, ಸುಮಾರು ₹25 ಲಕ್ಷಕ್ಕೂ ಅಧಿಕ ಮಾರುಕಟ್ಟೆ ಶುಲ್ಕ ಸಂಗ್ರಹವಾಗುವ ನಿರೀಕ್ಷೆಯಿದೆ.
ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು 30 ವರ್ಷಗಳ ಹಿಂದೆ ಅಳವಡಿಸಿದ್ದ ವೇಬ್ರಿಡ್ಜ್ ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಸಿಡಿಲು ಬಡಿದು ಹಾನಿಗೊಳಗಾಗಿದೆ. ಇದರ ಬದಲಿಗೆ 80 ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ತಂತ್ರಜ್ಞಾನ ಆಧಾರಿತ ಡಿಜಿಟಲ್ ವೇಬ್ರಿಡ್ಜ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಗೋವಿನಜೋಳ ಮಾರಾಟಕ್ಕೆ ತರುವ ರೈತರಿಗೆ ಫಸಲನ್ನು ಒಣಗಿಸಲು ಪ್ರಾಂಗಣದಲ್ಲಿ ಸಾಕಷ್ಟು ವಿಸ್ತಾರವಾದ ಸ್ಥಳಾವಕಾಶವಿದೆ. ಮಾರುಕಟ್ಟೆಯಲ್ಲಿ ಸುಮಾರು 46 ಮಂದಿ ಮಾರಾಟದ ಪರವಾನಗಿ ಪಡೆದಿದ್ದು, ಅವರಲ್ಲಿ 17ರಿಂದ 20 ಮಂದಿ ಗೋವಿನಜೋಳ ಖರೀದಿಸುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.
ಸರ್ಕಾರದ ಬೆಂಬಲ ಯೋಜನೆಯಡಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವನೆಯನ್ನು ಮೇಲಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಎಸ್. ಹಾವಣ್ಣವರ ತಿಳಿಸಿದ್ದಾರೆ.
ತಟ್ಟಿಗೇರಾ ಹಾಗೂ ಗೌಳಿವಾಡ ಗ್ರಾಮದ ಬೆಳೆಗಾರರಾದ ಗಂಗಾರಾಮ ರಾಮು ಎಡಗೆ, ನಕಲಿ ಬಾಯಿ ಭಾಗು ಎಡಗೆ, ಭಾಗಿಬಾಯಿ ರಾಮು ಎಡಗೆ ಹಾಗೂ ಜುಮ್ಮು ಬೀರು ಎಡಗೆ ಮಾತನಾಡಿ, ‘ನಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆ ಗೋವಿನಜೋಳ ಹಾಗೂ ಎರಡು ಎಕರೆ ಭತ್ತ ಬೆಳೆಯಲಾಗಿದೆ. ಗೋವಿನಜೋಳದಿಂದ ಸುಮಾರು 40 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿದೆ. ಈವರೆಗೆ ಕ್ವಿಂಟಲ್‌ಗೆ ₹2,550 ದರ ನಿಗದಿಪಡಿಸಲಾಗಿದ್ದು, ಅದೇ ದರಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದರು.
‘ಮಾರುಕಟ್ಟೆ ಪ್ರಾಂಗಣದಲ್ಲಿ ಗೋವಿನಜೋಳ ಒಣಗಿಸಿ ಚೀಲಗಳಲ್ಲಿ ತುಂಬಿದರೂ ವೇಬ್ರಿಡ್ಜ್ ಇಲ್ಲದ ಕಾರಣ ಬೇರೆಡೆ ತೂಕ ಮಾಡಿಸಬೇಕಾಗಿದೆ. ಇದರಿಂದ ಸಾಗಣೆ ವೆಚ್ಚದ ಹೊರೆ ರೈತರ ಮೇಲಾಗುತ್ತಿದೆ. ಕೂಡಲೇ ಮಾರುಕಟ್ಟೆ ಪ್ರಾಂಗಣದಲ್ಲಿ ವೇಬ್ರಿಡ್ಜ್ ಅಳವಡಿಸಬೇಕು’ ಎಂದು ಕೆಲ ರೈತರು ಆಗ್ರಹಿಸಿದ್ದಾರೆ.
ಶೇಖರಿಸಿಟ್ಟ ಗೋವಿನಜೋಳ ಮಳೆಯಲ್ಲಿ ನೆನೆದರೆ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಹೀಗಾಗಿ ಕಟಾವು ಮಾಡಿದ ಬೆಳೆಯನ್ನು ಮಾರಾಟವಾಗುವವರೆಗೆ ಸುರಕ್ಷಿತವಾಗಿ ಸಂರಕ್ಷಿಸಬೇಕು ಪಿ.ಐ. ಮಾನೆ, ಸಹಾಯಕ ಕೃಷಿ ನಿರ್ದೇಶಕ