ಕುಷ್ಟಗಿ ಉದ್ಯಾನ ಜಾಗ ಒತ್ತುವರಿಗೆ ಹುನ್ನಾರ; ಪುರಸಭೆ ಅಧಿಕಾರಿಗಳ ಮೇಲೆ ಆರೋಪ

ಕುಷ್ಟಗಿ ಉದ್ಯಾನ ಜಾಗ ಒತ್ತುವರಿಗೆ ಹುನ್ನಾರ; ಪುರಸಭೆ ಅಧಿಕಾರಿಗಳ ಮೇಲೆ ಆರೋಪ

ಕುಷ್ಟಗಿ ಉದ್ಯಾನ ಜಾಗ ಒತ್ತುವರಿಗೆ ಹುನ್ನಾರ; ಪುರಸಭೆ ಅಧಿಕಾರಿಗಳ ಮೇಲೆ ಆರೋಪ

ಕುಷ್ಟಗಿ: ಪಟ್ಟಣದಲ್ಲಿ ಸರ್ಕಾರದ ಕೆಲಸಗಳಿಗೆ ಒಂದಿಂಚೂ ಜಾಗ ಸಿಗುವುದಿಲ್ಲ, ಮುಖ್ಯರಸ್ತೆಯ ಅಕ್ಕಪಕ್ಕ, ವಾಣಿಜ್ಯ ಪ್ರದೇಶದಲ್ಲಿರುವ ಖಾಸಗಿ ನಿವೇಶನಗಳ ಬೆಲೆ ಕೋಟಿ ಲೆಕ್ಕಾಚಾರದಲ್ಲಿದೆ. ಆದರೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸಾರ್ವಜನಿಕ ಉದ್ಯಾನ ಜಾಗದ ಮೇಲೆ ಮತ್ತೆ ಪಟ್ಟಭದ್ರರು ಕಾಕಾದೃಷ್ಟಿ ಬೀರಿದ್ದು ಹೇಗಾದರೂ ಮಾಡಿ ಲಪಟಾಯಿಸುವ ಹುನ್ನಾರ ನಡೆಸಿರುವುದು ಕಂಡುಬಂದಿದೆ.

ಪಟ್ಟಣದಿಂದ ಕೊಪ್ಪಳ ರಸ್ತೆಯ ಬುತ್ತಿಬಸವೇಶ್ವರ ಶಾಲೆಯ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಉದ್ಯಾನಕ್ಕೆ ಬಂದೊದಗಿರುವ ದುಸ್ಥಿತಿ ಇದು. ಇಷ್ಟೇ ಜಾಗವನ್ನು ವಾಣಿಜ್ಯ ಸಂಕೀರ್ಣಕ್ಕೆ ಬಳಕೆ ಮಾಡಿಕೊಂಡರೆ ಅದರ ಮೌಲ್ಯ ಗಗನಕ್ಕೇರುತ್ತದೆ. ಈಗಾಗಲೇ ಬಹಳಷ್ಟು ಪ್ರದೇಶವನ್ನು ಕೆಲ ಪಟ್ಟಭದ್ರರು ಗುಳುಂ ಮಾಡಿದ್ದಾರೆ. ಪಟ್ಟಭದ್ರರೊಂದಿಗೆ ಶಾಮೀಲಾಗಿರುವ ಪುರಸಭೆಯ ಅಧಿಕಾರಿಗಳು, ಎಂಜಿನಿಯರು ಉದ್ಯಾನ ಜಾಗದಲ್ಲಿಯೇ ಅಕ್ರಮವಾಗಿ ಜಾಗ ಬಿಟ್ಟು ರಸ್ತೆ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಉದ್ಯಾನ ಜಾಗವನ್ನು ಉಳಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಉದ್ಯಾನ ನಿರ್ಮಿಸಿ ಸಾರ್ವಜನಿಕರು, ಮಕ್ಕಳು, ವಯೋವೃದ್ಧರು ಒಂದಷ್ಟು ಹೊತ್ತು ನಿರಾಳವಾಗಿ ಕಾಲ ಕಳೆಯುವುದಕ್ಕೆ ಗಿಡಮರಗಳನ್ನು ಬೆಳೆಸಬೇಕೆಂಬ ಪರಿಜ್ಞಾನ ಪುರಸಭೆ ಅಧಿಕಾರಿಗಳಿಗೆ ಎಳ್ಳಷ್ಟೂ ಇಲ್ಲ. ಅಂಥ ಸಾರ್ವಜನಿಕ ಜಾಗ ಇಲ್ಲದ ಕಾರಣ ಬದುಕಿನ ಮುಸ್ಸಂಜೆಯಲ್ಲಿರುವ ಸಾರ್ವಜನಿಕರು ರಸ್ತೆಪಕ್ಕದ ಸೇತುವೆ, ಕಟ್ಟೆಗಳ ಮೇಲೆ ಕುಳಿತು ಕಾಲ ಕಳೆಯುತ್ತಿರುವುದು ಸಾಮಾನ್ಯ ಸಂಗತಿ.

ಉದ್ಯಾನ ಜಾಗ ಒತ್ತುವರಿಯಾಗಿರುವುದು, ಬೇರೆಯವರ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಯಾಗಿರುವ ಕುರಿತು ಮೂರು ದಶಕಗಳಿಂದಲೂ ‘ಪ್ರಜಾವಾಣಿ’ ಸರ್ಕಾರದ ಗಮನಸೆಳೆಯುತ್ತ ಬಂದಿದೆ. ಈ ಕಾರಣದಿಂದಲೇ ಅಳಿದುಳಿದ ಜಾಗಕ್ಕೆ ಕೆಲ ತಿಂಗಳ ಹಿಂದಷ್ಟೇ ಪುರಸಭೆ ಕಾಟಾಚಾರಕ್ಕೆ ಎನ್ನುವಂತೆ ತಂತಿಬೇಲಿ ಅಳವಡಿಸಿದೆ. ಆಗಲೇ ತಂತಿಬೇಲಿ ಅಕ್ಕಪಕ್ಕದ ಕಿಡಿಗೇಡಿಗಳು ಕಿತ್ತುಹಾಕಿದ್ದಾರೆ. ಕೆಲ ಮನೆಯವರು, ವ್ಯಾಪಾರಿಗಳು ತಮ್ಮ ಸಾಮಗ್ರಿಗಳನ್ನು ಯಾವ ಅಡ್ಡಿ ಆತಂಕ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಪಕ್ಕದ ಖಾಸಗಿ ಶಾಲೆಯೇ ಉದ್ಯಾನ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದೆ ಈಗ ಮತ್ತೆ ಇನ್ನಷ್ಟು ಜಾಗ ಕಬಳಿಸಲು ಶೆಡ್‌ ನಿರ್ಮಿಸಿದೆ.

ವಿವಿಧ ರೀತಿಯ ತಂತ್ರಗಾರಿಕೆ ನಡೆಸಿಯಾದರೂ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಾನ ಜಾಗ ಕಬಳಿಸಲು ಹೊಂಚುಹಾಕಿ ಕುಳಿತಿದ್ದಾರೆ. ಇದು ಪುರಸಭೆ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನೂ ಅಲ್ಲ ಜಾಣ ಕುರುಡು ಪ್ರದರ್ಶಿಸುತ್ತಲೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಯನ್ನು ಮಾತನಾಡಿಸಿದರೆ,‘ನೀವೇನೂ ಬರೀಬ್ಯಾಡ್ರಿ, ಬರೆದರ ಡಿಸಿ ನಮ್ಮ ಬೆನ್ನು ಹತ್ತಾರ' ಎಂದು ಹೇಳಿದ್ದು ಅಚ್ಚರಿ ಮೂಡಿಸಿತು.

ಎಂಜಿನಿಯರ್‌ ಇಲ್ಲದ್ದಕ್ಕೆ ಸಮಸ್ಯೆ

ಮುನ್ಸಿಪಲ್‌ ಎಂಜಿನಿಯರ್‌ ಇಲ್ಲದ್ದಕ್ಕೆ ಸಮಸ್ಯೆಯಾಗಿದೆ, ಇದು ಕೇವಲ ನಮ್ಮದಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿಯೇ ಈ ಸಮಸ್ಯೆ ಇದೆ. ಪಟ್ಟಣದ ಎಲ್ಲ ಉದ್ಯಾನಗಳಿಗೆ ನಾಮಫಲಕ, ಬೇಲಿ ಹಾಕುವ ಕೆಲಸ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಉದ್ಯಾನ ಜಾಗದಲ್ಲಿ ತಂತಿ ಬೇಲಿ ಕಿತ್ತಿ ಸಾಮಗ್ರಿ ಸಂಗ್ರಹಿಸಿರುವುದು ಗಮನಕ್ಕೆ ಬಂದಿದ್ದು ತೆರವಿಗೆ ತಾಕೀತು ಮಾಡಿದರೂ ಕೆಲ ವ್ಯಕ್ತಿಗಳು ಮತ್ತದೇ ದಂಧೆ ಮುಂದುವರೆಸಿದ್ದಾರೆ ಎಂದು ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಹೇಳಿದರು.

ಅಲ್ಲದೆ ಉದ್ಯಾನಕ್ಕೆ ಇನ್ನಷ್ಟು ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ