
ಹೊಸದುರ್ಗ | ದುರ್ಗಾಪರಮೇಶ್ವರಿಗೆ ಭಕ್ತರಿಂದ ಅದ್ದೂರಿ ದೀಪೋತ್ಸವ
ಹೊಸದುರ್ಗ: ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ನವರಾತ್ರಿ ಅಂಗವಾಗಿ ಪ್ರತಿಷ್ಠಾಪಿಸಿದ್ದ ದುರ್ಗಾ ಪರಮೇಶ್ವರಿ ಅಮ್ಮನವರ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಈ ಬಾರಿ ಅಮ್ಮನವರ ಪ್ರತಿಷ್ಠಾಪನೆಯ ದ್ವಿತೀಯ ಸಂಕಲ್ಪದ ಕೊನೆಯ ವರ್ಷದ (ಒಂದು ಸಂಕಲ್ಪಕ್ಕೆ 9ನೇ ವರ್ಷದ) ಅಂಗವಾಗಿ ದಿನನಿತ್ಯ ವಿಶೇಷ ಪೂಜೆ, ಹೋಮ, ಹವನ, ಮಹಾಮಂಗಳಾರತಿ ಧಾರ್ಮಿಕ ವಿಧಿಗಳನ್ವಯ ನಡೆದವು.
ಶುಕ್ರವಾರ ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ವಿಶೇಷ ಪೂಜೆ, ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ ನಡೆದವು. ರಾತ್ರಿ ಸಾವಿರಾರು ಜನರ ಸಮ್ಮುಖದಲ್ಲಿ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ. ಮಂಜುನಾಥ್ ಬೃಹತ್ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಸಾವಿರಾರು ದೀಪ ಬೆಳಗಿಸಿದರು. ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು, ಗಮನ ಸೆಳೆಯುವಂತಿತ್ತು. ಪ್ರತಿದಿನ ಸಂಜೆ ಜಾನಪದ ನೃತ್ಯ, ನೃತ್ಯೋತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.