
ಮಕ್ಕಳೇ ದೇಶದ ಸಂಪತ್ತು: ದಸರಾ ಶಿಬಿರದಲ್ಲಿ ರಘುನಾಥ ಗೌಡ
ಸಿಂಸೆ (ನರಸಿಂಹರಾಜಪುರ): ‘ಮುಂದಿನ ಪ್ರಜೆಗಳಾಗಿರುವ ಮಕ್ಕಳೇ ದೇಶದ ಸಂಪತ್ತು. ದಸರಾ ಶಿಬಿರವನ್ನು ಸಂತೋಷದಿಂದ ಕಳೆಯಿರಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಘುನಾಥ ಗೌಡ ಹೇಳಿದರು.
ಅವರು ತಾಲ್ಲೂಕಿನ ಸಿಂಸೆ ಗ್ರಾಮದ ಸೋಷಿಯಲ್ ವೆಲ್‌ಫೇರ್ ಸೊಸೈಟಿಯು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಸರಾ ಶಿಬಿರವನ್ನು ಬೋರ್ಡ್‌ನಲ್ಲಿ ಸಂದೇಶ ಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಾಹನ ಚಾಲನೆ ಮಾಡುವಾಗ ದಾಖಲೆಗಳು ಇರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ ಪೋಷಕರಿಗೆ ₹25 ಸಾವಿರದವರೆಗೆ ದಂಡ ವಿಧಿಸಬಹುದು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯ. ಹೆಲ್ಮೆಟ್ ಧರಿಸುವುದರಿಂದ ಕತ್ತಿನ ಮೇಲ್ಭಾಗಕ್ಕೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ ಎಂದರು.
ಸಿವಿಲ್ ನ್ಯಾಯಾಧೀಶ, ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ಎಸ್. ಜೀತು ಅವರು, ಪ್ರತಿವರ್ಷ ಬೇಸಿಗೆ ರಜೆ, ದಸರಾ ರಜೆ, ಕ್ರಿಸ್‌ಮಸ್ ರಜೆ ಸಂದರ್ಭ ನಡೆಯುವ ಶಿಬಿರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಭಾರತದ ಸಂವಿಧಾನ ಪರಿಚಯಿಸುವ ಕಾರ್ಯಕ್ರಮ ಸೇರಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ಅವರು, ಸಂವಿಧಾನದಲ್ಲಿ ಮಕ್ಕಳ ಸಂರಕ್ಷಣೆಗೆ ಹಲವು ಕಾನೂನುಗಳು ಇವೆ. ಮಕ್ಕಳ ಕಡ್ಡಾಯ ಶಿಕ್ಷಣಕ್ಕೆ 2009ರಲ್ಲಿ ಆರ್ ಟಿ.ಇ ಕಾಯ್ದೆ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೋಷಿಯಲ್ ವೆಲ್‌ಫೇರ್ ಸೊಸೈಟಿ ನಿರ್ದೇಶಕ ಫಾದರ್ ವಿಪಿನ್ ಬೇಬಿ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ನಮ್ಮ ಸಂಸ್ಥೆ ದಸರಾ ಶಿಬಿರ ಹಮ್ಮಿಕೊಂಡಿದೆ. ಮಕ್ಕಳು ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸೋಷಿಯಲ್ ವೆಲ್‌ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿದರು. ಸಿನಿ ಜಾರ್ಜ್ ನಿರೂಪಿಸಿದರು. ಅರ್ಪಿತಾ ವಂದಿಸಿದರು.
ಸಂಪಲ್ಮೂಲ ವ್ಯಕ್ತಿಗಳಾಗಿದ್ದ ಶಿಕ್ಷಕರಾದ ಶಿಲ್ಲಾ ಕುಮಾರಿ, ತಿಮ್ಮೇಶ್, ಮಂಜುನಾಥ್ ಮಕ್ಕಳಿಗೆ ಚಿತ್ರಕಲೆ, ನೃತ್ಯ, ಆಟೋಟ, ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 5ರಿಂದ 10ನೇ ತರಗತಿಯ 114 ಮಕ್ಕಳು ಭಾಗವಹಿಸಿದ್ದರು. ಎಲ್ಲರಿಗೂ ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಬಗ್ಗೆ ಕಡಿಮೆ ಮಾಹಿತಿಯಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಾಹಿತಿ ಸೇರಿಸಬೇಕು ಆರ್.ಎಸ್. ಜೀತು, ಸಿವಿಲ್ ನ್ಯಾಯಾಧೀಶ