
ಬಾಣಂತಿ, ಪೋಷಕರನ್ನು ಮರಳಿ ಮನೆಗೆ ಸೇರಿಸಿದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ
ಹಿರಿಯೂರು: ಸಂಪ್ರದಾಯದ ಹೆಸರಿನಲ್ಲಿ ಬಾಣಂತಿ ಹಾಗೂ ಆಕೆಯ ಪೋಷಕರನ್ನು ಊರಾಚೆ ಇಡಲಾಗಿದ್ದ ತಾಲ್ಲೂಕಿನ ದಿಂಡಾವರ ಗ್ರಾಮ ಸಮೀಪದ ಬಾಲದೇವರಹಟ್ಟಿಗೆ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಭೇಟಿ ನೀಡಿ, ಅವರ ಮನವೊಲಿಸಿ ಶುಕ್ರವಾರ ಮರಳಿ ಮನೆಗೆ ಸೇರಿಸಿದರು.
‘ನಂಬಿಕೆಗಳ ಹೆಸರಿನಲ್ಲಿ ಹೆಣ್ಣಿನ ಶೋಷಣೆ ನಡೆಯಬಾರದು. ಮಹಿಳೆ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಬೇಕು. ಅವರನ್ನು ಅಸ್ಪೃಶ್ಯರಂತೆ ನೋಡಿ, ಎಲ್ಲ ರಂಗದಲ್ಲೂ ಹಿಂದುಳಿಯುವಂತೆ ಮಾಡುವುದು ಅಪರಾಧ. ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ ಎಂಬ ಕಾರಣಕ್ಕೆ ಬಾಣಂತಿಯರನ್ನು, ಋತುಚಕ್ರವಾದವರನ್ನು ಊರಾಚೆ ಇಡುವುದು ಸರಿಯಲ್ಲ. ಆಚಾರ– ವಿಚಾರಗಳಲ್ಲಿ ಪುರುಷ– ಮಹಿಳೆ ಎಂಬ ತಾರತಮ್ಯ ನಿವಾರಣೆ ಆಗಬೇಕು’ ಎಂದು ಹೋರಾಟಗಾರ್ತಿ ಜಿ.ಕೆ. ಪ್ರೇಮ ತಿಳಿ ಹೇಳಿದರು.
‘ಪಶುಪಾಲನೆಯನ್ನೇ ವೃತ್ತಿ ಮಾಡಿಕೊಂಡಿದ್ದ ಗೊಲ್ಲರು ಅಲೆಮಾರಿಗಳು. ಯಾವುದೋ ಕಾರಣಕ್ಕೆ ಬಾಣಂತಿಯರನ್ನು, ಋತುಚಕ್ರವಾದವರನ್ನು ಮನೆಯಿಂದ ಹೊರಗೆ ಇಡುವ ಪದ್ಧತಿ ಆಚರಣೆಗೆ ಬಂದಿದೆ. ದೊಡ್ಡ ದೊಡ್ಡ ಮನೆಯವರೂ ಹೆಣ್ಣುಮಕ್ಕಳನ್ನು ಊರಿಂದ ಹೊರಗೆ ಇಡುವುದು ಶೋಷಣೆಯ ಪರಮಾವಧಿ. ಬಾಲ್ಯ ವಿವಾಹ, ಮೌಢ್ಯಾಚರಣೆಗಳು ಶಿಕ್ಷಾರ್ಹ ಅಪರಾಧಗಳಾಗಿದ್ದು, ಎಲ್ಲರೂ ಸಾಮಾಜಿಕವಾಗಿ ಬದಲಾಗಬೇಕು’ ಎಂದು ಸಲಹೆ ನೀಡಿದರು.
ಒಕ್ಕೂಟದ ಸದಸ್ಯರಾದ ಸಬಿಹಾ ಭೂಮಿಗೌಡ, ಮಹಿಳಾ ವಿವಿ ನಿವೃತ್ತ ಕುಲಪತಿ ಸುಮನಾ, ಹೈಕೋರ್ಟ್ ವಕೀಲರಾದ ಅಖಿಲಾ, ಮಹಿಳಾ ದೌರ್ಜನ್ಯ ವಿರೋಧಿ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಗಾಯಿತ್ರಿ, ಹೋರಾಟಗಾರ್ತಿಯರಾದ ಅಧ್ಯಾಪಕಿ ಶಾಂತಾ, ಪ್ರಭಾ, ಅನ್ನಪೂರ್ಣ, ಮಮತಾ, ಕೃಷ್ಣ ಸೂರಪ್ಪನಹಟ್ಟಿ, ಕಿರಣ, ಪುಷ್ಪ, ರಘು ಹಾಜರಿದ್ದರು.