
ಬಾಯಿ ಮುಚ್ಚಿಸಲು ಕಾಯ್ದೆ ದುರ್ಬಳಕೆ - ಬಿ. ಶ್ರೀರಾಮುಲು ಆಕ್ರೋಶ
ಕೊಪ್ಪಳ: ‘ಮೂಲ ಸೌಕರ್ಯಕ್ಕಾಗಿ ಶಾಸಕರನ್ನು ಪ್ರಶ್ನಿಸಿದ್ದಕ್ಕೆ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ದುರ್ಬಳಕೆಯಾಗುತ್ತಿದೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹ್ಯಾಟಿ ಮುಂಡರಗಿ ಗ್ರಾಮಕ್ಕೆ ತೆರಳಿದ್ದೆ. ಅಲ್ಲಿನ ಜನ ಎಲ್ಲ ಒಂದಾಗಿದ್ದಾರೆ. ಶಾಸಕ ಹಿಟ್ನಾಳ ಬಂದಾಗ ಮೂಲ ಸೌಕರ್ಯ ಕೇಳಿದೆವು. ನಮಗೆ ಬೆದರಿಕೆಯೊಡ್ಡಿದರು. ನೀವು ಕೆಲಸ ಮಾಡಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಜನ ಶಾಸಕರನ್ನು ಗೆಲ್ಲಿಸಿದ್ದೇ ತಪ್ಪಾ’ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳಾದವರೂ ಸಮಾಧಾನದಿಂದ ಇರಬೇಕು. ಅನೇಕ ಕಡೆ ಇದೇ ರೀತಿ ಪ್ರಕರಣ ಹಾಕಿಸಲಾಗುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಬಿಟ್ಟು ಕಾಕ್ರೋಚ್ ಪಕ್ಷದ ಜೊತೆ ನಿಂತಿದ್ದಾರೆ. ಈ ಮೂಲಕ ರಾಹುಲ್ ಕೂಡ ಜಿರಳೆ ಆಗಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್ ವಿಸರ್ಜನೆ ಮಾಡಿ ಸಿಜೆಪಿ ಜೊತೆ ವಿಲೀನವಾಗಲು ಸಿದ್ಧವಾದಂತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ಆರೋಪಿಸಿದರು.
‘ಗುರು ಎಂದರೆ ಸಿದ್ದರಾಮಯ್ಯ, ಶಿಷ್ಯ ಎಂದರೆ ರಾಘವೇಂದ್ರ ಹಿಟ್ನಾಳ ತರ ಇರಬೇಕೆಂದು ನಾವು ಅಂದುಕೊಂಡಿದ್ದೆವು. ಸಿದ್ದರಾಮಯ್ಯ ಅವರನ್ನು ಇಳಿಸಲು ನಕಲಿ ಸಿಡಿ ತಯಾರಿಸಿದರು. ಮುಖ್ಯಮಂತ್ರಿ ಬದಲಾವಣೆಗೆ ಸಹಿ ಮಾಡಿದ 60 ಜನ ಶಾಸಕರಲ್ಲಿ ಹಿಟ್ನಾಳ ಎರಡನೇ ವ್ಯಕ್ತಿ. ರಾಜಕೀಯವಾಗಿ ಸಿದ್ದರಾಮಯ್ಯ ಅವರಿಂದ ಸಾಕಷ್ಟು ಲಾಭ ಪಡೆದು ಅವರನ್ನೇ ಕೆಳಗಿಳಿಸಿದರು’ ಎಂದು ಹೇಳಿದರು. ಈಶಾನ್ಯ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶಶಿಲ್ ನಮೋಶಿ ಪರ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ಮತಯಾಚನೆ ಮಾಡಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಅರುಣ್ ಶಹಾಪುರ, ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಶಂಭುಲಿಂಗನಗೌಡ ಹಲಗೇರಿ, ಅಮರೇಶ ಮುರಳಿ, ಪ್ರದೀಪ್ ಹಿಟ್ನಾಳ, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ್ ಸಜ್ಜನ್ ಪಾಲ್ಗೊಂಡಿದ್ದರು.