
ಸುಳ್ಯ ಪಟ್ಟಣದ ಒಣ ಕಸಕ್ಕೆ ಮುಕ್ತಿ; ಸ್ವಚ್ಛ ಭಾರತ ಮಿಷನ್ ಕಾರ್ಯಾರಂಭ
ಸುಳ್ಯ: ಪಟ್ಟಣದಲ್ಲಿ ಪ್ಲಾಸ್ಟಿಕ್ ಸೇರಿ ಒಣ ಕಸದ ನಿರ್ವಹಣೆಗಾಗಿ ಸ್ವಚ್ಛ ಭಾರತ್ ಮಿಷನ್‌ನ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯಾರಂಭಗೊಂಡಿದೆ. ಆ ಮೂಲಕ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಲಭಿಸಿದೆ.
ಕಸದ ಡಂಪಿಂಗ್ ಯಾರ್ಡ್ ಕಲ್ಚರ್ಪೆಯಲ್ಲಿ ತ್ಯಾಜ್ಯ ನಿರ್ವಹಣಾ ಕೇಂದ್ರ ಇದೆ. ಪಂಚಾಯಿತಿ ಕಚೇರಿ ಸಮೀಪ, ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ತುಂಬಿ ತುಳುಕುತ್ತಿದ್ದ ಒಣ ಕಸಗಳಿಗೆ ಇನ್ನು ಮುಕ್ತಿ ದೊರಕುವ ಸಾಧ್ಯತೆ ಇದೆ.
ಪಟ್ಟಣದಲ್ಲಿ ಪ್ರತಿ ದಿನ ಸಂಗ್ರಹವಾಗುವ ಕಸವನ್ನು ಸಂಗ್ರಹಿಸಿ ಒಣಕಸ, ಹಸಿ ಕಸ ಎಂದು ವಿಂಗಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರ ಮಾಡಲು ಖಾಸಗಿಯವರಿಗೆ ನೀಡಲಾಗುತ್ತದೆ. ಒಣ ಕಸವನ್ನು ಗೋಣಿ ಚೀಲದಲ್ಲಿ ತುಂಬಿಡಲಾಗುತ್ತಿತ್ತು. ಇದೀಗ ಒಣ ಕಸವನ್ನು ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಕಸ ವಿಂಗಡಣಾ ಮೆಷಿನ್ ಮೂಲಕ ಬೇರ್ಪಡಿಸಿ, ಬೇಲಿಂಗ್ ಮೆಷಿನ್ ಮೂಲಕ ಪ್ರತ್ಯೇಕ ಕಟ್ಟುಗಳ ಪ್ಯಾಕ್‌ಗಳಾಗಿ ಮಾಡಲಾಗುತ್ತದೆ. ಈ ಪ್ಲಾಸ್ಟಿಕ್ ಕಟ್ಟುಗಳನ್ನು ಮರು ಮಳಕೆ ಮಾಡುವ ಕಾರ್ಖಾನೆಗಳಿಗೆ ನೀಡಲು ಉದ್ದೇಶಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಕೇಂದ್ರ (ಎಂಆರ್‌ಎಫ್) ನಿರ್ಮಿಸಲಾಗಿದೆ. ₹32 ಲಕ್ಷದಲ್ಲಿ ಕೇಂದ್ರದ ಕಟ್ಟಡ, ₹15 ಲಕ್ಷ ವೆಚ್ಚದಲ್ಲಿ ವಿವಿಧ ಯಂತ್ರಗಳನ್ನು ಅಳವಡಿಸಲಾಗಿದೆ. ₹9 ಲಕ್ಷದಲ್ಲಿ ಒಣ ತ್ಯಾಜ್ಯ ಬೇರ್ಪಡಿಸುವ ಯಂತ್ರ, ಲಿಪ್ಟಿಂಗ್ ಯಂತ್ರ, ಶಿಪ್ಟಿಂಗ್ ವಾಹನ ಮತ್ತು ₹6 ಲಕ್ಷ ವೆಚ್ಚದಲ್ಲಿ ಬೇಲಿಂಗ್ ಯಂತ್ರ (ಸಕ್ಕಿಂಗ್ ಮೆಷಿನ್) ಅಳವಡಿಸಲಾಗಿದೆ.
ವಿದ್ಯುತ್ ಚಾಲಿತ ಯಂತ್ರಗಳ ಮೂಲಕ ಬೇರ್ಪಡಿಸಿದ ಒಣ ಕಸವನ್ನು ವಿವಿಧ ವಿಭಾಗಗಳಾಗಿ ಬೇಲಿಂಗ್ ಮೆಷಿನ್‌ಗೆ ಹಾಕಿ ಕಟ್ಟುಗಳಾಗಿ ಮಾಡಲಾಗುತ್ತದೆ. ಒಮ್ಮೆಗೆ ಸುಮಾರು 200 ಕೆಜಿಯ ಕಟ್ಟು ಮಾಡಬಹುದಾದರೂ ಸಾಗಣೆ ದೃಷ್ಟಿಯಿಂದ ಸದ್ಯ 80 ಕೆಜಿಯಿಂದ 100 ಕೆಜಿ ತನಕದ ಕಟ್ಟುಗಳಾಗಿ ಮಾಡಲಾಗುತ್ತಿದೆ. ಚಂದದ ಪ್ಯಾಕ್‌ಗಳಾಗಿ ಹೊರ ಬರುವ ಕಸದ ಕಟ್ಟುಗಳನ್ನು ತೂಕ ಮಾಡಿ ಕೆ.ಜಿ ನಮೂದಿಸಿ ಸಂಗ್ರಹ ಮಾಡಲಾಗುತ್ತಿದೆ. ಬಿಳಿ ಪ್ಲಾಸ್ಟಿಕ್, ಬಣ್ಣದ ಪ್ಲಾಸ್ಟಿಕ್ ಕವರ್‌ಗಳು, ಬಟ್ಟೆಗಳು, ಕಾಗದ, ಜ್ಯೂಸ್, ಮದ್ಯ ಮತ್ತಿತರ ತುಂಬುವ ಟೆಟ್ರಾ ಪ್ಯಾಕ್‌ಗಳು, ಪ್ಲಾಸ್ಟಿಕ್ ಬಾಟಲಿಗಳು ಹೀಗೆ ವಿವಿಧ ಒಣ ಕಸಗನ್ನು ಕಟ್ಟುಗಳಾಗಿ ಮಾಡಲಾಗುತ್ತಿದೆ.
ಕೇಂದ್ರ ಆರಂಭವಾದ ಮೇಲೆ ಪಂಚಾಯಿತಿ ಮುಂಭಾಗ ಮತ್ತು ಕಲ್ಚರ್ಪೆಯಲ್ಲಿ ತುಂಬಿಟ್ಟ ಒಣ ಕಸ ನಿಧಾನವಾಗಿ ಕಡಿಮೆಯಾಗುತ್ತಿದೆ. ಪ್ಲಾಸ್ಟಿಕ್ ಮರು ಬಳಕೆ ಮಾಡುವ ಕಾರ್ಖಾನೆಗಳಿಗೆ ಒಣ ಕಸವನ್ನು ಕಳುಹಿಸಲು ಪಂಚಾಯಿತಿ ಯೋಜನೆ ರೂಪಿಸಿದೆ. ಈಗಾಗಲೇ 4-5 ಟನ್ ಒಣ ಕಸವನ್ನು ಕಟ್ಟುಗಳಾಗಿ ಮಾಡಲಾಗಿದೆ. ಸುಮಾರು 15 ಟನ್ ಆದ ಬಳಿಕ ಇದನ್ನು ಟೆಂಡರ್ ಕರೆದು ಪ್ಲಾಸ್ಟಿಕ್ ಮರುಬಳಕೆ ಮಾಡುವ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಎಚ್.ಆರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.