
ಜೇನುನೊಣದ ಝೇಂಕಾರ, ಎಐ ಕರಾಮತ್ತು: ರೈಲು ಡಿಕ್ಕಿಯಿಂದ ನೂರಾರು ಆನೆಗಳ ರಕ್ಷಣೆ!
ಗುವಾಹಟಿ: ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಜನವರಿಯಿಂದ ಸೆಪ್ಟೆಂಬರ್ವರೆಗೆ 250ಕ್ಕೂ ಹೆಚ್ಚು ಆನೆಗಳನ್ನು ರೈಲು ಅಪಘಾತಗಳಿಂದ ರಕ್ಷಣೆ ಮಾಡಲಾಗಿದೆ. ತಂತ್ರಜ್ಞಾನದ ಮೊರೆ ಹೋಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಈಶಾನ್ಯ ಗಡಿ ರೈಲ್ವೆ (ಎನ್ಎಫ್ಆರ್) ತಿಳಿಸಿದೆ.
‘ಆನೆ ಕಾರಿಡಾರ್ಗಳಲ್ಲಿ ಕೆಳಸೇತುವೆಗಳ ನಿರ್ಮಾಣ, ಜೇನುನೊಣದ ಝೇಂಕಾರದ ಮಾದರಿ ಹಾರ್ನ್ಗಳನ್ನು ಬಳಸಿ ಆನೆಗಳು ಹಳಿ ಮೇಲೆ ಬರದಂತೆ ತಡೆಯುವುದು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಒಳನುಸುಳುವಿಕೆ ಪತ್ತೆಹಚ್ಚುವ ವ್ಯವಸ್ಥೆ ಅಳವಡಿಕೆಯಿಂದಾಗಿ ಆನೆಗಳನ್ನು ರೈಲು ಅಪಘಾತಗಳಿಂದ ರಕ್ಷಣೆ ಮಾಡಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರೈಲುಗಳಿಗೆ ಆನೆಗಳು ಡಿಕ್ಕಿ ಹೊಡೆಯುವುದನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಸುಮಾರು 200 ಕಿ.ಮೀ ವ್ಯಾಪ್ತಿಯ ನಾಲ್ಕು ವಿಭಾಗಗಳಲ್ಲಿ ಎಐ ಆಧಾರಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇದರ ವ್ಯಾಪ್ತಿಯು 64.03 ಕಿ.ಮೀ ಉದ್ದದ ಆನೆಗಳ ಸಂಚಾರ ಮಾರ್ಗಗಳು (ಕಾರಿಡಾರ್) ಮತ್ತು 141 ಕಿ.ಮೀ ಉದ್ದದ ‘ಬ್ಲಾಕ್ ಸೆಕ್ಷನ್’ಗಳನ್ನು ಒಳಗೊಂಡಿದೆ.
‘ಡಿಸ್ಟ್ರಿಬ್ಯೂಟೆಡ್ ಅಕೌಸ್ಟಿಕ್ ಸಿಸ್ಟಮ್’ (ಡಿಎಎಸ್) ತಂತ್ರಜ್ಞಾನವನ್ನು ಬಳಸುವ ಎಐ ಆಧಾರಿತ ಇಂಟ್ರೂಷನ್ ಡಿಟೆಕ್ಷನ್ ಸಿಸ್ಟಮ್ (ಐಡಿಎಸ್) ವ್ಯವಸ್ಥೆಯು, ರೈಲು ಹಳಿಗಳ ಸಮೀಪ ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡುತ್ತದೆ. ಜೊತೆಗೆ ಇದರ ಮಾಹಿತಿಯನ್ನು ರೈಲು ಚಾಲಕರು, ರೈಲ್ವೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಅಪಘಾತ ತಡೆಯಲು ತಕ್ಷಣದ ಕ್ರಮ ತೆಗೆದುಕೊಳ್ಳಬಹುದು’ ಎಂದು ಎನ್ಎಫ್ಆರ್ ವಕ್ತಾರ ಕಪಿಂಜಲ್ ಕಿಶೋರ್ ಶರ್ಮಾ ಹೇಳಿದ್ದಾರೆ.
ಈ ಉಪಕ್ರಮಗಳಿಂದಾಗಿ 255 ಆನೆಗಳನ್ನು ರಕ್ಷಿಸಲಾಗಿದೆ. ಈ ಪೈಕಿ ಆಲಿಪುರ್ದ್ವಾರ್ ವಿಭಾಗದಲ್ಲಿ (ಉತ್ತರ ಬಂಗಾಳ) 106, ರಂಗಿಯಾ ವಿಭಾಗದಲ್ಲಿ 14, ಲುಮ್ಡಿಂಗ್ ವಿಭಾಗದಲ್ಲಿ 122 ಮತ್ತು ಅಸ್ಸಾಂನ ಟಿನ್ಸುಕಿಯಾ ವಿಭಾಗದಲ್ಲಿ 15 ಆನೆಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎನ್ಎಫ್ಆರ್, ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಒಂದಾಗಿದೆ. ಇದು ಸಂಪೂರ್ಣ ಈಶಾನ್ಯ ಭಾಗ ಹಾಗೂ ಉತ್ತರ ಬಂಗಾಳ, ಬಿಹಾರದ ಕೆಲವು ಭಾಗಗಳನ್ನು ಒಳಗೊಂಡಿದೆ.
ರೈಲು ಡಿಕ್ಕಿಯಿಂದ ಕಾಡಾನೆಗಳು ಮೃತಪಡುತ್ತಿರುವುದು ಕಳವಳಕಾರಿ ವಿಷಯವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ, ಎನ್ಎಫ್ಆರ್ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಕಾಡಾನೆಗಳನ್ನು ರೈಲು ಹಳಿಗಳಿಂದ ದೂರವಿರಿಸಲು ಜೇನುನೊಣದ ಝೇಂಕಾರದ ಮಾದರಿ ಹಾರ್ನ್ಗಳನ್ನು ಬಳಸುವುದು, ರಾತ್ರಿಯ ವೇಳೆ ವೇಗದ ಮಿತಿ ಕಡ್ಡಾಯಗೊಳಿಸುವುದು, ಗಸ್ತು ತಿರುಗುವಿಕೆ ಮತ್ತು ರೈಲು ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವುದು ಮುಂತಾದ ಕ್ರಮಗಳು ಸೇರಿವೆ.
ದೇಶದಾದ್ಯಂತ ಪ್ರತಿವರ್ಷ ರೈಲು ಡಿಕ್ಕಿಯಿಂದ 80ಕ್ಕೂ ಹೆಚ್ಚು ಆನೆಗಳು ಮೃತಪಡುತ್ತಿವೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ರೈಲು ಹಳಿಗಳ ಮಾರ್ಗಗಳಲ್ಲಿಯೂ ಇಂತಹ ಹಲವು ಸಾವುಗಳು ಸಂಭವಿಸಿವೆ. 2025ರ ಡಿಸೆಂಬರ್ನಲ್ಲಿ ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಸಾಯಿರಂಗ್–ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಎಂಟು ಆನೆಗಳು ಮೃತಪಟ್ಟಿದ್ದವು.
‘ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಐಡಿಎಸ್ (ಐಡಿಎಸ್) ವ್ಯವಸ್ಥೆಯ ಪ್ರಾಯೋಗಿಕ ಯೋಜನೆಯನ್ನು ಎನ್ಎಫ್ಆರ್ನ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
‘ಆನೆಗಳ ಸಂಚಾರ ಮಾರ್ಗಗಳ (ಕಾರಿಡಾರ್) ಉಳಿದ 146.4 ಕಿಲೋಮೀಟರ್ ಮಾರ್ಗದಲ್ಲಿ ಐಡಿಎಸ್ ಅಳವಡಿಕೆಯ ಮುಂದಿನ ಹಂತದ ಕಾರ್ಯ ಪ್ರಗತಿಯಲ್ಲಿದ್ದು, 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎಂದಿದ್ದಾರೆ.