ಮೋದಿ, ಅಮಿತ್‌ ಶಾ ಮತದಾರರಲ್ಲಿ ಕ್ಷಮೆಯಾಚಿಸಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ಮೋದಿ, ಅಮಿತ್‌ ಶಾ ಮತದಾರರಲ್ಲಿ ಕ್ಷಮೆಯಾಚಿಸಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ಮೋದಿ, ಅಮಿತ್‌ ಶಾ ಮತದಾರರಲ್ಲಿ ಕ್ಷಮೆಯಾಚಿಸಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ದಾವಣಗೆರೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನೆಪದಲ್ಲಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಒತ್ತಾಯಿಸಿದರು.

‘ಎಸ್‌ಐಆರ್‌ ಪ್ರಕ್ರಿಯೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೂಸು. ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಆಯೋಗ ಪಕ್ಷಪಾತಿ ಧೋರಣೆ ಕೈಗೊಳ್ಳುತ್ತಿದೆ. ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್‌ ವರ್ತನೆ ಆಕ್ಷೇಪಾರ್ಹವಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾತಂತ್ರ ವ್ಯವಸ್ಥೆ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಚುನಾವಣಾ ಆಯೋಗವನ್ನು ದಾಳವಾಗಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ ವಿಧಾನಸಭೆ ಹಾಗೂ 2024ರ ಲೋಕಸಭಾ ಚುನಾವಣಾ ಫಲಿತಾಂಶ ಅನುಮಾನಾಸ್ಪದವಾಗಿವೆ. ಕೂಡಲೇ ಲೋಕಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ’ ಎಂದು ಸವಾಲು ಹಾಕಿದರು.

‘ಪಶ್ಚಿಮ ಬಂಗಾಳದಲ್ಲಿ 97 ಲಕ್ಷ, ಬಿಹಾರದಲ್ಲಿ 68 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕದಲ್ಲಿ 1.08 ಕೋಟಿ ಮತದಾರರ ಹಕ್ಕು ಕಸಿಯುವ ಪ್ರಯತ್ನ ನಡೆಯಿತು. ಅರ್ಜಿ ನಮೂನೆ–7ನ್ನು ದುರ್ಬಳಕೆ ಮಾಡಿಕೊಂಡು ಬಡವರು, ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾರರ ಹಕ್ಕು ಕಸಿಯುವ ಷಡ್ಯಂತ್ರವನ್ನು ಕಾಂಗ್ರೆಸ್‌ ಬಯಲು ಮಾಡಿದೆ’ ಎಂದು ಹೇಳಿದರು.

‘ರಾಜ್ಯವನ್ನು ಭೀಕರ ಬರ ಆವರಿಸಿದೆ. 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ಕೇಂದ್ರ ಸರ್ಕಾರ ಕೂಡಲೇ ರಾಜ್ಯದ ನೆರವಿಗೆ ಧಾವಿಸಬೇಕು. ಬಿಹಾರ, ಉತ್ತರಪ್ರದೇಶಕ್ಕೆ ನೀಡಿದ ರೀತಿಯಲ್ಲಿ ಕರ್ನಾಟಕಕ್ಕೂ ಕನಿಷ್ಠ ₹ 5,000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ’ ಎಂದರು.

‘ಸಂಘಟನ್‌ ಸೃಜನ್‌’ ವೀಕ್ಷಕರಾಗಿರುವ ವಿಧಾನಪರಿಷತ್‌ ಮಾಜಿ ಸದಸ್ಯ ಪ್ರಸನ್ನಕುಮಾರ್‌, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ, ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಅನಂತ ನಾಯ್ಕ, ಕಾಂಗ್ರೆಸ್‌ ಮುಖಂಡರಾದ ಪಾಲಯ್ಯ, ಎಚ್‌.ಬಿ. ಮಂಜಪ್ಪ, ದಿನೇಶ್‌ ಕೆ.ಶೆಟ್ಟಿ ಹಾಜರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ