
ತ್ಯಾಜ್ಯ ಘಟಕಕ್ಕೆ ಅನುಮತಿ ನೀಡಿದ್ದು ಯಾರು ಎಂದು ಬಹಿರಂಗವಾಗಬೇಕು: ಶಾಲೆಟ್ ಪಿಂಟೊ
ಮೂಲ್ಕಿ: ಜನವಸತಿ ಪ್ರದೇಶ, ದೈವ-ದೇವರ ಗುಡಿಗಳು, ಶಾಲಾ ವಠಾರ, ಕುಡಿಯುವ ನೀರಿನ ಹರಿವು ಇರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ದ್ರವ ತ್ಯಾಜ್ಯ ಘಟಕವನ್ನು ನಿರ್ಮಿಸಲು ಜನಪ್ರತಿನಿಧಿಗಳ ಆಡಳಿತ ಇಲ್ಲದ ಸಮಯದಲ್ಲಿ ಅನುಮತಿ ನೀಡಿದ ಅಧಿಕಾರಿ ಯಾರು ಎಂದು ಬಹಿರಂಗವಾಗಬೇಕು. ಜನರ ನೆಮ್ಮದಿ ಕೆಡಿಸುತ್ತಿರುವ ಇಂಥ ಘಟಕಕ್ಕೆ ಎಲ್ಲರ ವಿರೋಧವಿದ್ದು, ರಾಜಕೀಯ ರಹಿತವಾಗಿ ಹೋರಾಟ ನಿಲ್ಲುವುದಿಲ್ಲ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಕಚೇರಿಯ ಮುಂದೆ ಮೆನ್ನಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ದ್ರವತ್ಯಾಜ್ಯ ಘಟಕವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಘಟಕ ವಿರೋಧಿ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮಾತನಾಡಿ, ದ್ರವ ತ್ಯಾಜ್ಯ ಘಟಕ ನಿರ್ಮಾಣವಾದಲ್ಲಿ ಹೊರಹೊಮ್ಮುವ ದುರ್ವಾಸನೆ ಮತ್ತು ಸೊಳ್ಳೆಗಳಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಇಲ್ಲಿ ಶಾಲೆಗಳು ಆಸ್ಪತ್ರೆ, ಚರ್ಚ್, ಮಸೀದಿ, ದೇವಸ್ಥಾನ ಮತ್ತು ಪೇಟೆ ಜಾಗದ ಮಧ್ಯದಲ್ಲಿ ಘಟಕ ನಿರ್ಮಿಸುತ್ತಿರುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸುತ್ತಲೂ 500ಕ್ಕಿಂತ ಹೆಚ್ಚು ಮನೆಗಳು ಇವೆ. ಘಟಕದಿಂದ ಹರಡುವ ಕಲುಷಿತ ನೀರು ಭೂಮಿಯಲ್ಲಿ ಇಂಗಿ ಗ್ರಾಮದ ಸುತ್ತಮುತ್ತಲಿನ ಬಾವಿಗಳು, ಕೊಳವೆಬಾವಿಗಳ ಅಂತ ರ್ಜಲ ಕಲುಷಿತಗೊಳ್ಳುತ್ತದೆ ಎಂದರು.
ಹೋರಾಟಗಾರ ದೀಪಕ್ ರಾಡ್ರಿಗಸ್ ಮಾತನಾಡಿ, ಯೋಜನೆ ಆರಂಭಿಸುವ ಮುನ್ನ ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಒಪ್ಪಿಗೆ ಪಡೆದಿರುವುದಿಲ್ಲ. ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದ ಇದು ಆಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದರು.
ರಾಬರ್ಟ್ ರೊಜಾರಿಯೊ, ಸುಧಾಕರ, ಹೇಮಾಚಾರ್ಯ ಮಾತನಾಡಿದರು. ಪಟ್ಟಣ ಪಂಚಾ ಯಿತಿ ಸದಸ್ಯರಾದ ಸುನಿತಾ ರಾಡ್ರಿಗಸ್, ಕೋಕಿಲಾ, ಸಂತಾನ್ ಡಿಸೋಜ, ಗ್ರಾಮಸ್ಥರಾದ ದಿನೇಶ್ ಆಚಾರ್ಯ, ಹರೀಶ್, ಸಂತೋಷ್ ಆಚಾರ್ಯ, ರಾಜನ್ ಡಿಕೋಸ್ಟಾ, ಹಿಲ್ಡಾ ಡಿಸೋಜ, ಶಯನ್ಕುಮಾರ್ ಭಾಗವಹಿಸಿದ್ದರು. ಪ್ರಕಾಶ್ ಆಚಾರ್ಯ ವಂದಿಸಿದರು. ಪ್ರತಿಭಟನೆ ಬಳಿಕ ಹೋರಾ ಟಗಾರರು ಪಟ್ಟಣ ಪಂಚಾಯಿತಿ ಮು ಖ್ಯಾಧಿಕಾರಿ ಜಯಶಂಕರ ಪ್ರಸಾದ್ ಅವರಿಗೆ ಮನವಿ ನೀಡಿದರು. ಮೂಲ್ಕಿ ಪೊಲೀಸರು ಬಂದೋ ಬಸ್ತ್ ಮಾಡಿದ್ದರು.