ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ, ಕರಡಿ ಸಾವು: ನ್ಯಾಯವೇ ಇದು?

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ, ಕರಡಿ ಸಾವು: ನ್ಯಾಯವೇ ಇದು?

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ, ಕರಡಿ ಸಾವು: ನ್ಯಾಯವೇ ಇದು?

ದಾವಣಗೆರೆ: ತಮ್ಮ ಆವಾಸ ಸ್ಥಾನದ ಬಳಿಯೇ ಹಾದು ಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ದಾಟುವ ವೇಳೆ, ಅತಿ ವೇಗದಿಂದ ಸಂಚರಿಸುವ ವಾಹನಗಳು ಡಿಕ್ಕಿ ಹೊಡೆದು ಚಿರತೆ, ಕರಡಿ ಮತ್ತಿತರ ವನ್ಯಜೀವಿಗಳು ಗಾಯಗೊಳ್ಳುತ್ತಿರುವ ಹಾಗೂ ಸ್ಥಳದಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ದಾವಣಗೆರೆ, ಹಾವೇರಿ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ– 48 ಮತ್ತು 13ರಲ್ಲಿ ಗುಡ್ಡಗಾಡು, ಕುರುಚಲು ಕಾಡಿರುವ ಪ್ರದೇಶವಿದೆ.‌

ಸಾಮಾನ್ಯವಾಗಿ ಹಗಲಲ್ಲಿ ವಾಹನ ಮತ್ತು ಜನಸಂಚಾರ ಇರುವುದರಿಂದ ಕಾಡು ಪ್ರಾಣಿಗಳು ಆಹಾರ ಮತ್ತು ನೀರನ್ನು ಅರಸಿ ರಾತ್ರಿ 12ರ ನಂತರವೇ ಕಾಡುಮೇಡು ಅಲೆದಾಡುತ್ತ ಜನವಸತಿ ಪ್ರದೇಶದತ್ತ ಬರುತ್ತವೆ. ಈ ಸಂದರ್ಭ ರಸ್ತೆ ದಾಟುವಾಗ ವೇಗದಿಂದ ಬರುವ ವಾಹಗಳ ಅಡಿಗೆ ಸಿಲುಕಿ ಅಸುನೀಗುತ್ತಿವೆ.

ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಅ. 13ರಂದು ಮಂಗಳವಾರ ರಾತ್ರಿ ಮೃತಪಟ್ಟಿದೆ. ಇದೇ ಜಾಗದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲೇ ಚಿರತೆಗಳು ಮತ್ತು ಕರಡಿಗಳು ಮೃತಪಟ್ಟ ಉದಾಹರಣೆಗಳಿವೆ.

ಇತ್ತೀಚೆಗಷ್ಟೇ ದಾವಣಗೆರೆ ತಾಲ್ಲೂಕಿನ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ರಾತ್ರಿ ವೇಳೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಚಿರತೆ ಗಾಯಗೊಂಡಿತ್ತು. ಮಾರನೇ ದಿನ ರಕ್ಷಣೆಗೆ ತೆರಳಿದ್ದ ಅರಣ್ಯ ಇಲಾಖೆಯ ನೌಕರರ ಮೇಲೆರಗಿ ಗಾಯಗೊಳಿಸಿತ್ತು.‌ ಅರಿವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಹಂಪಿ ಬಳಿಯ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಿಕೊಡಲಾಗಿದ್ದ ಆ ಚಿರತೆಯನ್ನು ಅಲ್ಲಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕಳುಹಿಸಲಾಗಿದೆ. ಅಲ್ಲಿ ಆ ಚಿರತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ನಡೆದ ಅನತಿ ದೂರದಲ್ಲೇ ಕಳೆದ ವರ್ಷ ಹೆದ್ದಾರಿಯಲ್ಲೇ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಸಾವಿಗೀಡಾಗಿತ್ತು.ರಾತ್ರಿ ವೇಳೆ ಅನಿಯಂತ್ರಿತ ವೇಗದೊಂದಿಗೆ ಸಾಗುವ ವಾಹನಗಳ ಚಾಲಕರು, ದಿಢೀರ್‌ ಅಡ್ಡ ಬರುವ ಕಾಡು ಪ್ರಾಣಿಗಳಿಗೆ ಡಿಕ್ಕಿ ಹೊಡೆದರೂ ತಮ್ಮ ಮೇಲೆ ಕಾನೂನು ಕ್ರಮ ಆಗಬಹುದು ಎಂಬ ಭಯದಿಂದ ಅರಣ್ಯ ಇಲಾಖೆ ಸಿಬ್ಬಂದಿಗಾಗಲೀ, ರಾಷ್ಟ್ರೀಯ ಹೆದ್ದಾರಿ ಗಸ್ತು ಪಡೆಗಾಗಲೀ ವಿಷಯ ತಿಳಿಸದೇ ಪರಾರಿಯಾಗುತ್ತಾರೆ.

ಗಾಯಗೊಂಡ ಪ್ರಾಣಿಗಳು ತಕ್ಷಣಕ್ಕೆ ಚಿಕಿತ್ಸೆ ಸಿಕ್ಕರೆ ಬದುಕಿ ಉಳಿಯುವ ಸಾಧ್ಯತೆ ಇರುತ್ತದೆ. ಆದರೆ, ಡಿಕ್ಕಿ ಹೊಡೆದವರಾಗಲೀ, ಹಿಂದೆ ಬರುವ ವಾಹನಗಳ ಚಾಲಕರಾಗಲೀ ಗಾಯಾಳು ಪ್ರಾಣಿಗಳು ರಸ್ತೆ ನಡುವೆ ಬಿದ್ದು ನರಳುತ್ತಿರುವುದನ್ನು ಕಂಡೂ ಸಂಬಂಧಿಸಿದವರಿಗೆ ವಿಷಯ ತಿಳಿಸದೇ ಹೋಗುವುದರಿಂದ ಪ್ರಾಣಿಗಳು ರಾತ್ರಿಯೆಲ್ಲ ನರಳಿ ನರಳಿ ಪ್ರಾಣ ಬಿಡುತ್ತಿವೆ. ಕೆಲವು ಪ್ರಾಣಿಗಳು ಡಿಕ್ಕಿಯ ರಭಸಕ್ಕೆ ತಕ್ಷಣಕ್ಕೇ ಪ್ರಾಣ ಕಳೆದುಕೊಳ್ಳುತ್ತವೆ.

ಚಿರತೆಗಳು, ಕರಡಿಗಳು ಮಾತ್ರವಲ್ಲದೆ, ಜಿಂಕೆಗಳು, ಕಾಡು ಬೆಕ್ಕು, ಕಾಡು ಹಂದಿ, ಪುನುಗು ಬೆಕ್ಕು ಮತ್ತಿತರ ಪ್ರಾಣಿಗಳು ವಾಹನಗಳ ಡಿಕ್ಕಿಯಿಂದ ಸಾವಿಗೀಡಾಗುತ್ತಲೇ ಇವೆ. ಕೆಲವು ಕಾಡು ಪ್ರಾಣಿಗಳು ಅಪಘಾತದ ಸ್ಥಳದಲ್ಲೇ ಬೀಳದೇ ಕಾಡಿಗೆ ಹೋಗಿ ಸಾಯುತ್ತವೆ. ಅಂಥ ಪ್ರಾಣಿಗಳ ಸಾವಿನ ಕಾರಣ ಬೆಳಕಿಗೆ ಬರುವುದಿಲ್ಲ ಎಂಬುದು ಕಾಡುಮೇಡುಗಳ ಅಕ್ಕಪಕ್ಕದಲ್ಲೇ ಜಮೀನು ಹೊಂದಿರುವ ಕೃಷಿಕರು ನೀಡುವ ಮಾಹಿತಿ.

‘ವನ್ಯಜೀವಿಗಳ ಪ್ರಾಣರಕ್ಷಣೆಗೆ ನಿಗಾ ಅಗತ್ಯ’

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ, ಕರಡಿ ಮತ್ತಿತರ ಪ್ರಾಣಿಗಳು ಸಾಯುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಾಡುಮೇಡಿನಲ್ಲಿ ಚಿರತೆಯಂಥ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಲಕ್ಷಣ. ಸಾಮಾನ್ಯವಾಗಿ ಚಿರತೆ ಜನನಿಬೀಡ ಸ್ಥಳಗಳಲ್ಲಿ ಸಂಚರಿಸುವುದಿಲ್ಲ. ಅದರಲ್ಲೂ ಬಯಲುಸೀಮೆಯ ಕುರುಚಲು ಕಾಡುಗಳಲ್ಲಿ ವಾಸವಿರುವ ಚಿರತೆ ವಾಹನಗಳ ದಟ್ಟಣೆ ಇರುವ ಹೆದ್ದಾರಿಗೆ ಬರುತ್ತಿರಲಿಲ್ಲ. ಅಷ್ಟೊಂದು ಸೂಕ್ಷ್ಮ ಸ್ವಭಾವದ ಈ ಪ್ರಾಣಿ ಇತ್ತೀಚೆಗೆ ಯಾವ ಕಾರಣಕ್ಕೆ ಹೆದ್ದಾರಿಗೆ ಬರುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ಅಧ್ಯಯನ ಅಗತ್ಯವಿದೆ ಎಂದು ಜಿಲ್ಲಾ ವನ್ಯಜೀವಿ ಗೌರವ ಪಾಲಕರಾದ ಡಾ.ಟಿ.ಜಿ. ರವಿಕುಮಾರ್‌ ‘ಪ್ರಜಾವಾಣಿ’ಗೆ ಅಭಿಪ್ರಾಯಪಟ್ಟರು.

‘ಹೆದ್ದಾರಿಗಳ 2ರಿಂದ 3 ಕಿ.ಮೀ. ಆಸುಪಾಸಿನಲ್ಲಿರುವ ವನ್ಯಜೀವಿಗಳ ಆವಾಸಸ್ಥಾನ ಶುರುವಾಗುವ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ನಿಗಾ ಇರಿಸುವುದಲ್ಲದೆ, ವಾಹನಗಳಿಗೆ ವೇಗದ ಮಿತಿ ಸೂಚಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ನಾನೂ ಸಹ ಈ ಬಗ್ಗೆ ಪ್ರಸ್ತಾವ ಸಲ್ಲಿಸುವೆ’ ಎಂದು ಅವರು ತಿಳಿಸಿದರು.

ಅಪಘಾತಗಳು ಸಂಭವಿಸಿ ಕಾಡು ಪ್ರಾಣಿಗಳು ಮೃತಪಡುವ, ಗಾಯಗೊಳ್ಳುವ ಘಟನೆಗಳು ದಾವಣಗೆರೆಯ ಆನಗೋಡು, ನೀರ್ಥಡಿ, ಹೆಬ್ಬಾಳು, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ, ಚಿತ್ರದುರ್ಗದ ತಮಟಕಲ್ಲು, ಕುಂಚಿಗನಾಳ್‌ ಕಣಿವೆ, ಚಳ್ಳಕೆರೆ, ಮೊಳಕಾಲ್ಮುರು, ಹಾವೇರಿಯ ಮೋಟೆಬೆನ್ನೂರು, ರಾಣೇಬೆನ್ನೂರು, ವಿಜಯನಗರದ ಮರಿಯಮ್ಮನಹಳ್ಳಿ, ಕೂಡ್ಲಿಗಿ ಭಾಗದಲ್ಲಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಡೆಯುತ್ತಿವೆ. ಇಲ್ಲೆಲ್ಲ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳ ಮಾದರಿಯಲ್ಲಿ ರಾತ್ರಿ ವೇಳೆ ವಾಹನಗಳ ಅತಿ ವೇಗದ ಸಂಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರಾಣಿಗಳು ಹೆದ್ದಾರಿಯೊಳಗೆ ಸುಲಭವಾಗಿ ನುಸುಳದಂತೆ ಬ್ಯಾರಿಕೇಡ್‌ ಅಳವಡಿಸುವ ಅಗತ್ಯವಿದೆ ಎಂದೂ ಅವರು ಮನವಿ ಮಾಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ