
ಲಾಲ್ ಬಹದ್ದೂರ್ ಶಾಸ್ತ್ರಿ ಎಲ್ಲರಿಗೂ ಮಾದರಿ: ಟಿ.ಪಿ. ರಮೇಶ್
ಮಡಿಕೇರಿ: ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ನೈತಿಕತೆಯ ಮೂಲಕ ಇಂದಿನ ಪೀಳಿಗೆಯ ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ರಾಜಕಾರಿಣಿಗಳಿಗೂ ಮಾದರಿಯಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಆಯೋಜಿಸಿದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಜೈ ಜವಾನ್ ಮತ್ತು ಜೈ ಕಿಸಾನ್’ ಎಂದು ಘೋಷಣೆಗಳನ್ನು ನೀಡಿ ದೇಶದ ಬಲವರ್ಧನೆಗೆ ಸೈನಿಕ ಮತ್ತು ರೈತ ಅನಿವಾರ್ಯ ಎಂದು ಬಲವಾಗಿ ಪ್ರತಿಪಾದಿಸಿದರು. ದೇಶದ ಪ್ರಧಾನ ಮಂತ್ರಿಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸ ಮಾಡಿ ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಶಾಸ್ತ್ರಿ ಅವರು ಜಗತ್ತಿಗೆ ತೋರಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ಬಳಸಿ ಜಗತ್ತನ್ನೇ ಬೆರಗುಗೊಳಿಸಿದ ಗಾಂಧೀಜಿಯವರನ್ನು ನಾವು ಪ್ರತಿನಿತ್ಯ ದೇವರಂತೆ ಸ್ಮರಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡಗೆಗಳು ಅವರ ನೆನಪನ್ನು ಸದಾ ಕಾಲ ಜೀವಂತವಾಗಿಸಿದೆ ಎಂದು ಹೇಳಿದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಸ್ಮಾಯಿಲ್, ಡಿ.ಸಿ.ಸಿ ಸದಸ್ಯರಾದ ಅಬ್ದುಲ್ ರಜಾಕ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕವನ್ ಕೊತ್ತೋಳಿ, ಪ್ರಚಾರ ಸಮಿತಿ ಬ್ಲಾಕ್ ಅಧ್ಯಕ್ಷ ವಿ.ಜಿ.ಮೋಹನ್, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್, ಮಹಿಳಾ ನಗರಾಧ್ಯಕ್ಷ ಶಶಿ, ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ನಗರ ಯುವ ಘಟಕದ ಅಧ್ಯಕ್ಷ ಅರ್ಜುನ್ ಮುಖಂಡರಾದ ಜಿ.ಸಿ.ಜಗದೀಶ್, ಫ್ಯಾನ್ಸಿ ಪಾರ್ವತಿ, ರಿಯಾಸ್ಸುದ್ದೀನ್, ಮುನೀರ್ ಮಾಚರ್, ವಸಂತ್ ಭಟ್, ಬೊಳ್ಳಿಯಂಡ ಗಣೇಶ್, ಮೀನಾಜ್ ಪ್ರವೀಣ್ ,ವೀಣಾಕ್ಷಿ ,ಲೀಲಾ ಶೇಷಮ್ಮ ಭಾಗವಹಿಸಿದ್ದರು.