
ರೈತರಿಗೆ ಅನ್ಯಾಯವಾದರೆ ಮತ್ತೆ ಹೋರಾಟ: ಬಸಯ್ಯ ಗುಡ್ಡಿಮಠ ಎಚ್ಚರಿಕೆ
ಗದಗ: ‘ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ. ಕಳಸಾ ಬಂಡೂರಿ ಯೋಜನೆ ಜಾರಿ, ಬರ ನಿರ್ವಹಣೆ, ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಲ್ಲಿ ಅನ್ಯಾಯ ಮಾಡಿದರೆ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರವು ರೈತರ ನೋವಿಗೆ ಸ್ಪಂದಿಸಿದರೆ ಹೋರಾಟದ ಪ್ರಶ್ನೆಯೇ ಬರುವುದಿಲ್ಲ. ಆದರೆ, ಅನ್ಯಾಯದ ವಿರುದ್ಧ ಹೋರಾಡಲು ರೈತರು ಕಟಿಬದ್ಧರಾಗಿದ್ದೇವೆ’ ಎಂದರು.
‘ಕೇಂದ್ರ ಸಚಿವರಾಗಿರುವ ಕಾರಣ ಪ್ರಲ್ಹಾದ ಜೋಶಿ ಅವರನ್ನು ಒತ್ತಾಯಿಸಲಾಯಿತೇ ವಿನಃ ಅವರನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಆತ್ಮಾನಂದ ಕಣವಿ, ಈರಣ್ಣ ಅಂಗಡಿ, ಮಂಜುನಾಥ ಪರ್ವತಗೌಡರ, ಹನುಮಂತಪ್ಪ ಈಳಗೇರಿ, ಸದ್ದಾಂ ಹುಸೇನ್, ಸೋಮಪ್ಪ, ನಾಗಯ್ಯ ಸಾಲಿಮಠ, ಶಂಭು ಜತ್ಲಿ, ಪ್ರಭಯ್ಯ ಹಿರೇಮಠ ಇದ್ದರು.