ವಂಶವೃಕ್ಷ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಸಮರ್ಥನೀಯವಲ್ಲ: ಹೈಕೋರ್ಟ್
ಬೆಂಗಳೂರು: ‘ಮೃತ ವಂಶಸ್ಥರು ವಾಸ ಮಾಡಿದ್ದ ಸ್ಥಳ ಹಾಗೂ ಜೀವಂತವಾಗಿರುವ ಕುಟುಂಬದ ಸದಸ್ಯರು ವಾಸ ಮಾಡುತ್ತಿರುವ ಸ್ಥಳಗಳ ಭಿನ್ನತೆಯ ಆಧಾರದಲ್ಲಿ ಕಂದಾಯ ಅಧಿಕಾರಿಗಳು ವಂಶವೃಕ್ಷದ ಪ್ರಮಾಣಪತ್ರ ನೀಡಲು ನಿರಾಕರಿಸುವುದು ಸಮರ್ಥನೀಯವಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ತಮ್ಮ ಕುಟುಂಬದ ಸದಸ್ಯರ ವಂಶವೃಕ್ಷ ಪ್ರಮಾಣಪತ್ರ ವಿತರಿಸಲು ನಿರಾಕರಿಸಿದ್ದ ಬೆಂಗಳೂರು ನಗರ ದಕ್ಷಿಣ ತಾಲ್ಲೂಕಿನ ತಾವರೆಕೆರೆ ಉಪ ವಲಯದ ತಹಶೀಲ್ದಾರ್ ಮತ್ತು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಬಿ.ಎಸ್.ಅಭಿನಂದನ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಪುರಸ್ಕರಿಸಿದೆ.
‘ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಕೆಲವರು ತಾಲ್ಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿಲ್ಲ’ ಎಂಬ ಕಾರಣ ನೀಡಿ ಅಭಿನಂದನ್ ಅವರ ‘ಸಕಾಲ ಮೇಲ್ಮನವಿ’ಯನ್ನು ತಿರಸ್ಕರಿಸಿದ್ದ 2021ರ ಡಿಸೆಂಬರ್ 27ರ ಆದೇಶವನ್ನು ನ್ಯಾಯಪೀಠ ರದ್ದುಪಡಿಸಿದೆ.
‘ಕರ್ನಾಟಕ ಸಕಾಲ ಸೇವೆಗಳ ಕಾಯ್ದೆಯ ಉಲ್ಲೇಖದಂತೆ ಬದುಕುಳಿದ ಕುಟುಂಬದ ಸದಸ್ಯರ ಪ್ರಮಾಣಪತ್ರ ವಿತರಿಸಲು ತಹಶೀಲ್ದಾರ್ ಸಕ್ಷಮ ಅಧಿಕಾರಿಯಾಗಿದ್ದಾರೆ’ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ವಂಶವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣಪತ್ರ ನೀಡಲು, ಸಂಬಂಧಪಟ್ಟ ಕಂದಾಯ ಅಧಿಕಾರಿಯ ತಹಶೀಲ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮೃತ ಪೂರ್ವಜರು ಅಥವಾ ಕುಟುಂಬದ ಸದಸ್ಯರ ವಂಶಸ್ಥರು ಅಥವಾ ಅಗತ್ಯ ದಾಖಲೆ ಹೊಂದಿರುವ ಕಾನೂನುಬದ್ಧ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗಳೇ ಸಾಕಾಗುತ್ತದೆ. ಈ ನಿಟ್ಟಿನಲ್ಲಿ ಹಾಲಿ ಪ್ರಕರಣದಲ್ಲಿ ತಹಶೀಲ್ದಾರ್ ಅವರು, 2026ರ ಜುಲೈ 17ರ ಸುತ್ತೋಲೆಯ ಅನುಸಾರ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣಪತ್ರ ವಿತರಿಸಬೇಕು’ ಎಂದು ನಿರ್ದೇಶಿಸಿದೆ.
ಪ್ರಕರಣ: ತನ್ನ ಕುಟುಂಬದ 11 ಸದಸ್ಯರನ್ನು ಒಳಗೊಂಡ ವಂಶವೃಕ್ಷ ಪ್ರಮಾಣಪತ್ರ ವಿತರಿಸುವಂತೆ ಕೋರಿ ಅರ್ಜಿದಾರರು, ತಾವರೆಕೆರೆಯ ಉಪ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ‘ಕುಟುಂಬದ ಎಲ್ಲ ಸದಸ್ಯರ ವಿಳಾಸದ ದಾಖಲೆ ಮತ್ತು ಮೃತಪಟ್ಟಿರುವ ಸದಸ್ಯರ ಮರಣ ಪ್ರಮಾಣಪತ್ರವನ್ನು ಒದಗಿಸಿಲ್ಲ’ ಎಂಬ ಕಾರಣ ನೀಡಿ ತಹಶೀಲ್ದಾರ್ ಅರ್ಜಿ ತಿರಸ್ಕರಿಸಿದ್ದರು. ಈ ಆದೇಶವನ್ನು ಉಪ ವಿಭಾಗಾಧಿಕಾರಿಯೂ ಪುರಸ್ಕರಿಸಿದ್ದರು.
‘ನಿವಾಸ ಪ್ರಮಾಣಪತ್ರಕ್ಕೆ ಸಮೀಕರಣ ಸಲ್ಲ’
‘ಕುಟುಂಬದ ಸದಸ್ಯರ ಮರಣದ ನಂತರ, ಕಂದಾಯ ದಾಖಲೆಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರುಗಳ ರೂಪಾಂತರ, ಉದ್ಯೋಗವನ್ನು ಪಡೆಯುವುದು, ಆಸ್ತಿ ವಹಿವಾಟು, ಪಾಲು ದಾವೆ, ಪರಿಹಾರ ಹಕ್ಕುಗಳು ಸೇರಿದಂತೆ ಹಲವಾರು ಆಡಳಿತಾತ್ಮಕ ಉದ್ದೇಶಗಳಿಗಾಗಿ ಬದುಕುಳಿದವರ ಪ್ರಮಾಣಪತ್ರ, ವಂಶಾವಳಿ ಅಥವಾ ವಂಶವೃಕ್ಷವು ಅಗತ್ಯವಾಗಿರುತ್ತದೆ ಎಂಬುದು ಗಮನಾರ್ಹ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
‘ವಂಶಾವಳಿಯು ಮೂಲ ಪೂರ್ವಜರಿಂದ ಬಂದಿದೆ ಮತ್ತು ಮರಣದ ಮೊದಲು ಅವರ ಶಾಶ್ವತ ವಾಸಸ್ಥಳವು ನಿರ್ಣಾಯಕ ಅಂಶವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು’ ಎಂದು ಹೇಳಿರುವ ನ್ಯಾಯಪೀಠ, ‘ಕಂದಾಯ ಅಧಿಕಾರಿಗಳ ಸ್ಥಳೀಯ ತಪಾಸಣೆ, ವಿಚಾರಣೆಯ ಸಮಯದಲ್ಲಿ ಯಾವುದೇ ಆಕ್ಷೇಪಣೆ ಅಥವಾ ವಿವಾದಗಳು ಕಂಡುಬಂದಿಲ್ಲದೇ ಇದ್ದರೆ, ಅಂತಹ ಪ್ರಮಾಣಪತ್ರಗಳನ್ನು ನೀಡಲು ನಿರಾಕರಿಸುವುದು ಸಲ್ಲ’ ಎಂದು ತಿಳಿಸಿದೆ.
‘ನಿವಾಸ ಪ್ರಮಾಣ ಪತ್ರ ಕೋರುವ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಗದಿತ ಅವಧಿಯವರೆಗೆ ವಾಸವಾಗಿರುವುದು ಕಡ್ಡಾಯವಾಗಿರಬಹುದು. ಆದರೆ, ವಂಶವೃಕ್ಷದ ಮೂಲ ಪೂರ್ವಜರಿಂದಲೇ ಆರಂಭವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗೆಯೇ, ನಿಧನಕ್ಕೂ ಮುನ್ನ ವ್ಯಕ್ತಿಯೊಬ್ಬರು ಶಾಶ್ವತವಾಗಿ ನೆಲಸಿದ್ದ ಸ್ಥಳವೇ ನಿರ್ಣಾಯಕ ಅಂಶವಾಗಿರುತ್ತದೆ. ಹೀಗಾಗಿ, ವಂಶವೃಕ್ಷ ಪ್ರಮಾಣಪತ್ರ ನೀಡುವುದನ್ನು ನಿವಾಸ ಪ್ರಮಾಣಪತ್ರ ನೀಡುವುದಕ್ಕೆ ಸಮೀಕರಣ ಮಾಡಲಾಗದು’ ಎಂದು ನ್ಯಾಯಪೀಠ ಹೇಳಿದೆ.