
ಸುಂಟಿಕೊಪ್ಪ ಮಾದಾಪುರ ರಸ್ತೆಯಲ್ಲಿ ಸಂಚಾರ ದಟ್ಟಣೆ: ವಿದ್ಯಾರ್ಥಿಗಳಿಗೆ ತೊಂದರೆ
ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಶಾಲೆಯ ಅಕ್ಕಪಕ್ಕದ ರಸ್ತೆಯಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರದ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಶಾಲಾ ವಾಹನಗಳು ಸೇರಿದಂತೆ ಇತರೆ ವಾಹನಗಳ ಓಡಾಟದಿಂದ ಶಾಲಾ ಮಕ್ಕಳು ಸಂಚರಿಸಲು ಆಗುತ್ತಿಲ್ಲ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿ ಆಂಗ್ಲ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳು ಇದ್ದು, ಏಕಕಾಲದಲ್ಲಿ ಶಾಲೆ ಬಿಡುವುದರಿಂದ ವಾಹನದಟ್ಟಣೆ ಹೆಚ್ಚಾಗಿದೆ.
ಶಾಲೆಗಳ ಗೇಟಿನ ಬಲಭಾಗ ಮತ್ತು ಎಡಭಾಗಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸುವಂತೆ 15 ದಿನಗಳ ಹಿಂದೆ ಭೇಟಿ ನೀಡಿದ್ದ ಸಿಪಿಐ ದಿನೇಶ್ ಕುಮಾರ್ ಅವರು ನಿರ್ದೇಶನ ನೀಡಿದ್ದರೂ ಅದನ್ನು ಪಾಲಿಸುತ್ತಿಲ್ಲ.
ಹಲವು ತಿಂಗಳುಗಳಿಂದ ಸಮಸ್ಯೆ ಇದ್ದು, ಈ ಬಗ್ಗೆ ಪೊಲೀಸರಿಗೆ ಮನವಿ ಮಾಡಿದರೂ ಸುಂಟಿಕೊಪ್ಪ ಪೊಲೀಸರು ಎಚ್ಚೆತ್ತುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೆ ಅಪಘಾತವಾದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
‘ಸಂಜೆ ವೇಳೆ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆ ದಾಟಲು ಕಷ್ಟಕರವಾಗುತ್ತದೆ. ಈ ಸ್ಥಳದಲ್ಲಿ ಯಾವುದೇ ಪೊಲೀಸರು ಇಲ್ಲ. ಭಯದಿಂದಲೇ ನಾವು ರಸ್ತೆ ದಾಟುತ್ತೇವೆ, ಕೂಡಲೇ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು’ ಎಂದು ವಿದ್ಯಾರ್ಥಿನಿ ಸೋವಿತಾ ಹೇಳುತ್ತಾರೆ.
ಮಾದಾಪುರ ರಸ್ತೆಯಲ್ಲಿ ಶಾಲೆ ಪ್ರಾರಂಭ ಮತ್ತು ಬಿಡುವ ವೇಳೆಯಲ್ಲಿ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಎಸ್‌ಪಿ ಅವರು ಗಮನಹರಿಸಬೇಕು ಎಂಬುದು ಸುಂಟಿಕೊಪ್ಪ ನಿವಾಸಿ ಶಶಿಕುಮಾರ್ ಅವರ ಒತ್ತಾಯ.
ಹಲವು ಬಾರಿ ನಾನೇ ಮಕ್ಕಳನ್ನು ರಸ್ತೆ ದಾಟಿಸುವ ಮತ್ತು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಕೆಲಸ ಮಾಡಿದ್ದೇನೆ. ಶಾಲೆಯ ಮಕ್ಕಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು, ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಟೊ ಚಾಲಕ ಮಹಮ್ಮದ್ ಆಗ್ರಹಿಸಿದ್ದಾರೆ.