'₹2,500 ಪರಿಹಾರ; ರೈತರು ಭಿಕ್ಷುಕರೇ?': ಜೆಡಿಎಸ್ ಮುಖಂಡರ ಆಕ್ರೋಶ

'₹2,500 ಪರಿಹಾರ; ರೈತರು ಭಿಕ್ಷುಕರೇ?': ಜೆಡಿಎಸ್ ಮುಖಂಡರ ಆಕ್ರೋಶ

'₹2,500 ಪರಿಹಾರ; ರೈತರು ಭಿಕ್ಷುಕರೇ?': ಜೆಡಿಎಸ್ ಮುಖಂಡರ ಆಕ್ರೋಶ

ಕೋಲಾರ: ರೈತರಿಗೆ ₹2,500 ಪರಿಹಾರ ನೀಡಿರುವುದನ್ನು ಜಿಲ್ಲಾ ಜೆಡಿಎಸ್‌ ಮುಖಂಡರು ಟೀಕಿಸಿದ್ದು, ಅನ್ನ ನೀಡುವ ರೈತರನ್ನು ರಾಜ್ಯ ಸರ್ಕಾರ ಬೇಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಅನ್ನದಾತರನ್ನು ಭಿಕ್ಷುಕರಂತೆ ಕಾಣದೆ, ಸಮರ್ಪಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನಗರದ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಶ್ರೀನಿವಾಸಪುರ ಶಾಸಕ ಜಿ.ವಿ.ವೆಂಕಟಶಿವಾರೆಡ್ಡಿ, ‘ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರೈತರಿಗೆ ಸಮರ್ಪಕ ಬರ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅ.2ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಬಂಗಾರಪೇಟೆಯ ಎಪಿಎಂಸಿಗೆ ಬರಲಿದ್ದು, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

43 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂತಹ ಬರ ಪರಿಸ್ಥಿತಿಯನ್ನು ನೋಡಿಲ್ಲ. ರೈತರಿಗೆ ಈವರೆಗೆ ಸಮರ್ಪಕವಾಗಿ ಪರಿಹಾರ ತಲುಪಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ‌ ಕೂಡಲೇ ಸಾಲಮನ್ನಾ‌ ಮಾಡಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆ: ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ನಿಖಿಲ್‌ ಕುಮಾರಸ್ವಾಮಿ ‌ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ’ ಮೂಲಕ ರೈತರೊಂದಿಗೆ ಸಂವಾದ ನಡೆಸಿ, ಪಾದಯಾತ್ರೆ ಮೂಲಕ ಸಮಸ್ಯೆ ಆಲಿಸಲಾಗುತ್ತಿದೆ‌. ಕನಕಪುರ‌ ತಾಲ್ಲೂಕಿನಲ್ಲಿ ಆರಂಭವಾಗಿದ್ದು, ಜಿಲ್ಲೆಯಲ್ಲಿ ಬಂಗಾರಪೇಟೆ ಎಪಿಎಂಸಿ ರೈತರು, ಹೈನುಗಾರರು, ಕೂಲಿಕಾರ್ಮಿಕರ ಸಮಸ್ಯೆಯನ್ನು ನಿಖಿಲ್‌ ಆಲಿಸಲಿದ್ದಾರೆ’ ಎಂದರು.

‌ಕಾಂಗ್ರೆಸ್‌ ಸರ್ಕಾರ ಬಂದ ‌ಮೇಲೆ ಮೂರೂವರೆ ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಆರ್ಥಿಕ ದಿವಾಳಿ ಆಗಿದ್ದು, ‌ರೈತರ ಸಮಸ್ಯೆಗೆ‌ ಸ್ಪಂದಿಸುತ್ತಿಲ್ಲ. 3 ಗಂಟೆ ಕೂಡ ಗುಣಮಟ್ಟದ ವಿದ್ಯುತ್ ನೀಡುತ್ತಿಲ್ಲ. ಗೋಶಾಲೆ ತೆರೆದಿಲ್ಲ, ಮೇವು ಬ್ಯಾಂಕ್‌ ಸ್ಥಾಪಿಸಿಲ್ಲ. ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿ ವೃದ್ಧಿಗೆ ಹಿನ್ನಡೆಯಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,‌ ಸಚಿವ ಮಾಗಡಿ‌ ಬಾಲಕೃಷ್ಣ ಒಪ್ಪಿಕೊಂಡಿದ್ದಾರೆ‌. ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಹೊಸ ಘೋಷಣೆಗಳನ್ನು ಮಾಡದಂತೆ ಹಣಕಾಸು ಇಲಾಖೆ ಸೂಚಿಸಿರುವುದು ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಸಾಕ್ಷಿ ಎಂದು ಹರಿಹಾಯ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ‘ರಾಜ್ಯಕ್ಕೆ ಎಷ್ಟು ಸಾವಿರ ಕೋಟಿ ಬರ ಪರಿಹಾರ ಅಗತ್ಯವಿದೆ ಎಂಬುದರ ಕುರಿತು ಕೇಂದ್ರಕ್ಕೆ ಸಮರ್ಪಕ ಪ್ರಸ್ತಾವ ಸಲ್ಲಿಸಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಅರಿಯುವ ಪ್ರಯತ್ನ ಮಾಡಿಲ್ಲ. ಇದೀಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ದೂರಿದರು.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯನ್ನೂ ಸಮರ್ಪಕವಾಗಿ ನಡೆಸುತ್ತಿಲ್ಲ. ಸಂಸದರು‌ ದಿಶಾ ಸಭೆ ನಡೆಸಿ‌ ಬರ‌ ಸಂಬಂಧ ವರದಿ ಸಲ್ಲಿಸಬೇಕು ಎಂದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್‌, ‘ಜಿಲ್ಲೆಯಲ್ಲಿ ಮಳೆ‌ ಇಲ್ಲದೆ ನೀರಿನ ಅಭಾವ‌ ಉಂಟಾಗಿದೆ. ಬೆಳೆ ಒಣಗಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇವಲ ₹ 2,500 ಪರಿಹಾರ ಘೋಷಿಸಿದ್ದು ಮೂರು ಕೆ.ಜಿ‌ ಮಟನ್ ಕೂಡ‌ ಬರಲ್ಲ’ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬುಮೌನಿ ಭಾಗವಹಿಸಿದ್ದರು.

‘ರೈತರಿಗಿಂತ ರಿಯಲ್ ಎಸ್ಟೇಟ್‌ಗೆ ಆದ್ಯತೆ’

ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತರ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರೈತರಿಗೆ ₹2,500 ಪರಿಹಾರ ಘೋಷಿಸುವ ಮೂಲಕ ಅನ್ನದಾತರನ್ನು ಭಿಕ್ಷುಕರಂತೆ ನೋಡುತ್ತಿದೆ. ರೈತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಕನಿಷ್ಠ ₹ 25 ಸಾವಿರ ‌ಪರಿಹಾರ‌ ನೀಡಬೇಕು. ಪ್ರತಿ ತಾಲ್ಲೂಕಿಗೆ ₹ 100 ಕೋಟಿಯಂತೆ ಜಿಲ್ಲೆಗೆ ₹ 600 ಕೋಟಿ ಪರಿಹಾರ‌ ನೀಡಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್‌ ಶ್ರೀನಾಥ್‌ ಆಗ್ರಹಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ