
ಕಲಬುರಗಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ವಜಾಕ್ಕೆ ಆಗ್ರಹಿಸಿ ಧರಣಿ
ಕಲಬುರಗಿ: ‘ಎಸ್‌ಐಆರ್ ಹೆಸರಿನಲ್ಲಿ ದೇಶದ ನಾಗರಿಕರ ಮತದಾನದ ಹಕ್ಕುಗಳನ್ನು ಅಕ್ರಮವಾಗಿ ಕಸಿದುಕೊಳ್ಳಲು ಅಧಿಕಾರ ದುರುಪಯೋಗ ಪಡಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸಲು ಆಗ್ರಹಿಸಿ ನಾಗರಿಕರ ಹಕ್ಕುಗಳ ರಕ್ಷಣಾ ಆಂದೋಲನದ ವತಿಯಿಂದ ಅ.2ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಆಂದೋಲನದ ಸಂಚಾಲಕ ಮಹೇಶಕುಮಾರ ರಾಠೋಡ ತಿಳಿಸಿದರು.
‘ಅಂದು ಬೆಳಿಗ್ಗೆ 11.30ರಿಂದ ಜಗತ್ ವೃತ್ತದಲ್ಲಿ ಧರಣಿ ಆರಂಭಿಸಲಾಗುವುದು. ಈ ಮಧ್ಯ ಮಧ್ಯಾಹ್ನ 2.30ಕ್ಕೆ ಸೂಪರ್ ಮಾರ್ಕೆಟ್‌ನಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ಸಂಜೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ‘ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಬಿಜೆಪಿ ವಿರೋಧಿ ಮತಗಳನ್ನು ಕಟ್ ಮಾಡಲು ಎಸ್‌ಐಆರ್ ನಡೆಸಲಾಗುತ್ತಿದೆ. ಆಯೋಗವನ್ನು ಪರಿಶುದ್ಧಗೊಳಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಆಂದೋಲನದ ಸಂಚಾಲಕ ಅಫಝಲ್ ಮಹಿಮೂದ ಮಾತನಾಡಿ, ‘ಮುಖ್ಯ ಚುನಾವಣಾ ಆಯುಕ್ತರು ಸರ್ವಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಎಸ್‌ಐಆರ್ ನಡೆಸಲಾಗುತ್ತಿದೆ’ ಎಂದು ದೂರಿದರು.
ಸಲೀಂ ಅಹಮದ್ ಚಿತಾಪೂರಿ, ಶರಣಬಸಪ್ಪ ಮಮಶೆಟ್ಟಿ, ಎಸ್.ಎಂ.ಶರ್ಮಾ, ಮುಬಿನ್ ಅಹ್ಮದ್, ಸಂಜೀವ ಸ್ಯಾಮ್ಸನ್ ಇದ್ದರು.