ಬರಿದಾದ ಬ್ಯಾರೇಜ್: ಔರಾದ್ ಪಟ್ಟಣದಲ್ಲಿ ಜಲಕ್ಷಾಮ ಭೀತಿ

ಬರಿದಾದ ಬ್ಯಾರೇಜ್: ಔರಾದ್ ಪಟ್ಟಣದಲ್ಲಿ ಜಲಕ್ಷಾಮ ಭೀತಿ

ಬರಿದಾದ ಬ್ಯಾರೇಜ್: ಔರಾದ್ ಪಟ್ಟಣದಲ್ಲಿ ಜಲಕ್ಷಾಮ ಭೀತಿ

ಔರಾದ್: ಈ ಬಾರಿ ತೀವ್ರ ಮಳೆ ಕೊರತೆಯಿಂದ ನದಿ, ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದು, ಔರಾದ್ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ.

ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಪಟ್ಟಣದ ಜನ ಈ ಬಾರಿ ಮಳೆಗಾಲದಲ್ಲೇ ನೀರಿನ ಅಭಾವ ಎದುರಿಸುವಂತಾಗಿದೆ. ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಕುಸಿದಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಔರಾದ್ ಪಟ್ಟಣ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಿಗೆ ಹಾಲಹಳ್ಳಿ ಬ್ಯಾರೇಜ್‌ನಿಂದ ಕುಡಿಯಲು ನೀರು ಪೂರೈಸಲಾಗುತ್ತಿದೆ. ಆದರೆ, ಬ್ಯಾರೇಜ್‌ನಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿಲ್ಲದ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪರಿಣಾಮವಾಗಿ ಹಲವು ವಾರ್ಡ್‌ಗಳಲ್ಲಿ 8ರಿಂದ 10 ದಿನಗಳಿಗೊಮ್ಮೆ ಮಾತ್ರ ನೀರು ಬರುತ್ತಿದ್ದು, ಅದೂ ಕೆಲವೇ ಕೊಡಗಳಿಗೆ ಸೀಮಿತವಾಗಿದೆ. ಅನಿವಾರ್ಯವಾಗಿ ಜನರು ಟ್ಯಾಂಕರ್‌ಗಳ ಮೂಲಕ ನೀರು ಖರೀದಿಸಿ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾಗಿದೆ.

‘ನಮ್ಮ ವಾರ್ಡ್‌ಗಳಲ್ಲಿ ಕಳೆದ 11 ದಿನಗಳ ಬಳಿಕ ನೀರು ಬಂದಿದೆ. ಅದೂ ನಾಲ್ಕೈದು ಕೊಡಗಳಷ್ಟು ಮಾತ್ರ. ದಸರಾ ಹಬ್ಬ ಇರುವುದರಿಂದ ಮನೆ ಸ್ವಚ್ಛಗೊಳಿಸಲು ಹೆಚ್ಚಿನ ನೀರು ಬೇಕಾಗಿದೆ. ಹೀಗಾಗಿ ಟ್ಯಾಂಕರ್‌ನಿಂದ ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ’ ಎಂದು ವಾರ್ಡ್–3ರ ನಿವಾಸಿ ಅಮರ ಅಶೋಕ ಅಳಲು ತೋಡಿಕೊಂಡರು.

ಪಟ್ಟಣದ ಪತಗಿ ಗಲ್ಲಿ ನಿವಾಸಿ ಛೋಟುಮಿಯ್ಯಾ ಅವರದ್ದೂ ಇದೇ ಗೋಳು. ನಮ್ಮ ಗಲ್ಲಿಗೆ 8ರಿಂದ 10 ದಿನಗಳಿಗೊಮ್ಮೆ ನೀರು ಬರುತ್ತದೆ. ಅದೂ ಕುಡಿಯಲು ಯೋಗ್ಯವಾಗಿರುವುದಿಲ್ಲ. ಕುಡಿಯುವ ನೀರಿಗಾಗಿ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಔರಾದ್ ಪಟ್ಟಣದ ಕುಡಿಯುವ ನೀರಿನ ಪ್ರಮುಖ ಆಧಾರವಾಗಿರುವ ಹಾಲಹಳ್ಳಿ ಬ್ಯಾರೇಜ್‌ಗೆ ಕಾರಂಜಾ ಜಲಾಶಯದಿಂದ ನೀರು ಹರಿಸಿದಾಗ ಮಾತ್ರ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತದೆ.

ಆದರೆ, ಸದ್ಯ ಕಾರಂಜಾ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿರುವುದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕಕ್ಕೆ ಕಾರಣವಾಗಿದೆ.

ಇನ್ನೂ ಬೇಸಿಗೆ ಆರಂಭವಾಗಲು ಹಲವು ತಿಂಗಳು ಬಾಕಿ ಇರುವಾಗಲೇ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಮಳೆ ಕೊರತೆ ಮುಂದುವರಿದರೆ ಹಾಗೂ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಈಗಿನಿಂದಲೇ ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಲು ಜನ ಒತ್ತಾಯಿಸಿದ್ದಾರೆ.

ಅಮೃತ ಕಾಮಗಾರಿ ವಿಳಂಬ: ಆಕ್ರೋಶ

ಪಟ್ಟಣ ಹಾಗೂ ವಿವಿಧ ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ ₹84 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2023ರಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದ ಈ ಯೋಜನೆ ಕಾಮಗಾರಿ 2026ರ ಜನವರಿಯಲ್ಲೇ ಪೂರ್ಣಗೊಂಡು ಜನರಿಗೆ ನೀರು ಪೂರೈಕೆಯಾಗಬೇಕಿತ್ತು. ಆದರೆ, ನಿಗದಿತ ಗಡುವು ಮುಗಿದರೂ ಪೈಪ್‌ಲೈನ್ ಅಳವಡಿಕೆ ಹಾಗೂ ನೀರು ಸಂಗ್ರಹ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ