
ದಸರಾ ಮಹೋತ್ಸವ: ಐವರಿಗೆ ‘ರಂಭಾಪುರಿ ಪೀಠದ ಪ್ರಶಸ್ತಿ’
ಬಾಳೆಹೊನ್ನೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ 35ನೇ ವರ್ಷದ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ರಂಭಾಪುರಿ ಸ್ವಾಮೀಜಿ ಪ್ರಶಸ್ತಿ ಪ್ರಕಟಿಸಿದ್ದಾರೆ.
ಮಹಾಂತಪುರ ಚಿಣಮಗೇರಿಯ ಮಹಾಂತೇಶ್ವರ ಕ್ಷೇತ್ರದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ, ಬೆಳಗಾವಿಯ ಸಾಹಿತಿ ಡಾ. ಅನ್ನಪೂರ್ಣ ರಾಚಯ್ಯ ಹಿರೇಮಠ ಅವರಿಗೆ ‘ಸಾಹಿತ್ಯ ಸಿರಿ’ ಪ್ರಶಸ್ತಿ, ಶಿವಮೊಗ್ಗದ ಆಸರೆ ಸಮಾಜ ಸೇವಾ ಟ್ರಸ್ಟ್‌ನ ಕೆ.ಎಂ. ಸತೀಶ್‍ಗೌಡ ಅವರಿಗೆ ‘ಸಾಧನ ಸಿರಿ’ ಪ್ರಶಸ್ತಿ, ಜಮಖಂಡಿಯ ಸಮಾಜ ಸೇವಕ ಸಿದ್ದು ನ್ಯಾಮಗೌಡ ಕವಟಗಿ ಅವರಿಗೆ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ ಗುಡಗುಂಟಿ ಅವರಿಗೆ ‘ವೀರಶೈವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ರಂಭಾಪುರಿ ಪೀಠದ ಪ್ರಸಿದ್ಧ ಪ್ರಶಸ್ತಿಗಳು ಇದಾಗಿದ್ದು, ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಿ ಸಮ್ಮೇಳನದ ವಿವಿಧ ದಿನದಂದು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.