
ಜಯಣ್ಣ, ಒಡೆಯರ್ ಭದ್ರಾ ಹೋರಾಟ ಸ್ಮರಣೀಯ: ಚಿಂತಕ ಯಾದವರೆಡ್ಡಿ
ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್ ನಡೆಸಿದ ಹೋರಾಟ ಸ್ಮರಣೀಯ. ಅವರನ್ನು ಮರೆತರೆ ನಾವ್ಯಾರೂ ಕ್ಷಮೆಗೆ ಅರ್ಹರಲ್ಲ’ ಎಂದು ಚಿಂತಕ ಜೆ.ಯಾದವರೆಡ್ಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಯಣ್ಣ ಒಡೆಯರ್ ಹೋರಾಟ ವೇದಿಕೆಯಿಂದ ಬುಧವಾರ ಆಯೋಜಿಸಿದ್ದ ಭದ್ರಾ ನೀರು ಸಮರ್ಪಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಇಬ್ಬರು ಎಂದಿಗೂ ತಮ್ಮ ಕುಟುಂಬ ಕ್ಕಾಗಿ ಬದುಕಿದವರಲ್ಲ. ಜಿಲ್ಲೆಯ ರೈತರು, ಜನಸಾಮಾನ್ಯರ ಒಳಿತನ್ನಿಟ್ಟುಕೊಂಡು ಹೋರಾಟ ನಡೆಸಿ ರಾಜಕಾರಣದಿಂದ ದೂರವಿದ್ದವರು’ ಎಂದರು.
‘ಜೀವಪರ, ಜನಪರ ಕಾಳಜಿಯುಳ್ಳವರಾಗಿದ್ದ ಇವರಿಗೆ ಗೌರವ ಸಮರ್ಪಿಸುವುದರಲ್ಲಿ ನಿಜವಾದ ಅರ್ಥವಿದೆ. ಜಿಲ್ಲೆಯಲ್ಲಿ ದಲಿತರ ಮೇಲೆ ಎಲ್ಲಿಯೇ ದೌರ್ಜನ್ಯ, ದಬ್ಬಾಳಿಕೆಯಾದರೆ ಹೋರಾಟದ ಮುಂಚೂಣಿಯಲ್ಲಿ ಇರುತ್ತಿದ್ದರು. ಆದರೆ, ಅವರ ಬದುಕು ನಿಕೃಷ್ಟವಾಗಿತ್ತು. ಈಗಲೂ ಅವರ ಮಕ್ಕಳು ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಭದ್ರಾ ನೀರು ಜಿಲ್ಲೆ ಪ್ರವೇಶಿಸುತ್ತಿದ್ದಂತೆ ನಾವೇ ಹೋರಾಟ ಮಾಡಿದ್ದು ಎಂದು ಅನೇಕರು ಹುಟ್ಟಿಕೊಂಡಿದ್ದಾರೆ. ಆದರೆ, ನೈಜ ಚಳವಳಿಗಾರರು ಇಂತಹವರ ಅಬ್ಬರದಲ್ಲಿ ಕಣ್ಮರೆ ಆಗುತ್ತಿದ್ದಾರೆ. ಆದ್ದರಿಂದ ಎರಡು ದೇಹ ಒಂದೇ ಆತ್ಮದಂತಿದ್ದ ಜಯಣ್ಣ ಒಡೆಯರ್ ಅವರ ಸಮಾಧಿ ಹಾಗೂ ಒನಕೆ ಓಬವ್ವ ವೃತ್ತದಲ್ಲಿ ಇಬ್ಬರ ಭಾವಚಿತ್ರಕ್ಕೆ ಭದ್ರಾ ನೀರು ಸಮರ್ಪಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಗುವುದು’ ಎಂದು ಕನ್ನಡಪರ ಹೋರಾಟಗಾರ ಕೆ.ಟಿ.ಶಿವಕುಮಾರ್ ತಿಳಿಸಿದರು.
‘ಜಿಲ್ಲೆಯ ಹಿತಕ್ಕಾಗಿ ಹೋರಾಡಿದ ಜಯಣ್ಣ, ಒಡೆಯರ್ ಅವರಿಗೆ ಜಿಲ್ಲೆಗೆ ನೀರು ಬರುವುದನ್ನು ನೋಡುವ ಭಾಗ್ಯವಿಲ್ಲದಂತಾಗಿರುವುದು ನೋವುಂಟು ಮಾಡಿದೆ. ಹೋರಾಟ ಮಾಡಿದ ಅವರಿಗೆ ಕೃತಜ್ಞತೆ ಸಮರ್ಪಿಸದಿದ್ದರೆ ಹೋರಾಟ ಅಪೂರ್ಣಗೊಳ್ಳುತ್ತದೆ’ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಹೇಳಿದರು.
ಟಿಪ್ಪುಸುಲ್ತಾನ್ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿಪ್ಪು ಖಾಸಿಂ ಆಲಿ, ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್, ಲೇಖಕ ಎಚ್.ಆನಂದ ಕುಮಾರ್, ಮುಖಂಡರಾದ ಡಿ. ದುರುಗೇಶ್, ಬಿ.ರಾಜಪ್ಪ, ಟಿ.ಶಫಿವುಲ್ಲಾ, ಧನಂಜಯ್ಯ, ಬಸ್ತಿಹಳ್ಳಿ ಸುರೇಶಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಣ್ಮೇಶ್, ಪುರುಷೋತ್ತಮ್ ತೊರಣಕಟ್ಟೆ, ಬಂಜಗೆರೆ ವೆಂಕಟೇಶ್ ಇದ್ದರು.