ನರೇಗಲ್:‌ ಐತಿಹಾಸಿಕ ಹಿರೇಕೆರೆಗೆ ಅಸ್ತಿತ್ವದ ಭೀತಿ

ನರೇಗಲ್:‌ ಐತಿಹಾಸಿಕ ಹಿರೇಕೆರೆಗೆ ಅಸ್ತಿತ್ವದ ಭೀತಿ

ನರೇಗಲ್:‌ ಐತಿಹಾಸಿಕ ಹಿರೇಕೆರೆಗೆ ಅಸ್ತಿತ್ವದ ಭೀತಿ

ನರೇಗಲ್:‌ ಪಟ್ಟಣ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ದಾಹ ತಣಿಸಿ, ಕೃಷಿ ಭೂಮಿಗೆ ಹಸಿರು ಸಿರಿಯೊದಗಿಸುತ್ತಿದ್ದ ನರೇಗಲ್‌ನ ಐತಿಹಾಸಿಕ ‘ಹಿರೇಕೆರೆ’ ಇಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರಂತರ ನಿರ್ಲಕ್ಷ್ಯದಿಂದಾಗಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.

ಇಲ್ಲಿನ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ನದಿ ಅಥವಾ ಕಾಲುವೆಗಳ ಸಂಪರ್ಕವಿಲ್ಲ. ಬಹುತೇಕ ರೈತರು ಒಣ ಬೇಸಾಯ ಹಾಗೂ ಕೊಳವೆಬಾವಿಗಳನ್ನು ನೆಚ್ಚಿಕೊಂಡೇ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂತರ್ಜಲ ಮರುಪೂರಣದ ಪ್ರಮುಖ ಆಸರೆ ಆಗಬೇಕಿದ್ದ ಬೃಹತ್ ಕೆರೆ, ಇಂದು ಮಳೆ ನೀರನ್ನೂ ಹಿಡಿದಿಟ್ಟುಕೊಳ್ಳಲಾಗದಷ್ಟು ಹೂಳು ಹಾಗೂ ಜಾಲಿ ಕಂಟಿಗಳಿಂದ ಆವೃತವಾಗಿದೆ. ಈಚೆಗೆ ಸುರಿದ ಮಳೆಗೆ ಕೋಡಿಕೊಪ್ಪ ಭಾಗದ ಹಿರೇಕೆರೆಯ ನಾಲ್ಕನೇ ಸಣ್ಣಕೆರೆಗೆ ಅಲ್ಪ ನೀರು ಬಂದಿತಾದರೂ ಹಿರೇಕೆರೆ ಮಾತ್ರ ನೀರಿಲ್ಲದೆ ಬರಿದಾಗಿದೆ.

ಸ್ಥಳೀಯ ನೆಲ-ಜಲ ಅಭಿವೃದ್ಧಿ ಸಮಿತಿ ಹಾಗೂ ರೈತರು ಸಮುದಾಯದ ಸಹಭಾಗಿತ್ವದಲ್ಲಿ 2018-19, 2020ರಲ್ಲಿ ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಅಂದಾಜು ₹5 ಕೋಟಿ ಮೌಲ್ಯದ ಹೂಳೆತ್ತುವ ಮತ್ತು ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಸರಿಯಾದ ನಿರ್ವಹಣೆ ಮಾಡದ ಕಾರಣ ಶ್ರಮವೆಲ್ಲ ವ್ಯರ್ಥವಾದಂತಾಗಿದೆ. ಅಂದಾಜು 30 ಎಕರೆ ವಿಸ್ತೀರ್ಣದ ಈ ಕೆರೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದರೂ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು ಸೃಷ್ಟಿಯಾಗಿವೆ. ನಾಲ್ಕನೇ ಕೆರೆಗೆ ಪಟ್ಟಣದ ಚರಂಡಿ ನೀರು ನೇರವಾಗಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಪರಿಣಾಮವಾಗಿ, ಐತಿಹಾಸಿಕ ಜಲಮೂಲವು ಬೆಳಿಗ್ಗೆ ಬಯಲು ಶೌಚಾಲಯವಾಗಿ, ಸಂಜೆಯಾಗುತ್ತಿದ್ದಂತೆ ಪುಂಡರ ಅಡ್ಡೆಯಾಗಿ ಮಾರ್ಪಟ್ಟಿದೆ.

ಹಿರೇಕೆರೆ ಭರ್ತಿಯಾದರೆ ನರೇಗಲ್‌, ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ಮಲ್ಲಾಪುರ, ಬೂದಿಹಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಒಣಗುತ್ತಿರುವ ಕೊಳವೆಬಾವಿಗಳಿಗೆ ಜೀವ ತುಂಬಲು ಒತ್ತುವರಿಯಾದ ರಾಜಕಾಲುವೆಗಳನ್ನು ತೆರವುಗೊಳಿಸಿ, ಮಳೆ ನೀರು ಕೆರೆ ಸೇರುವಂತೆ ಮಾಡಬೇಕಾದ ತುರ್ತು ಅಗತ್ಯವಿದೆ.

ರಾಜಮನೆತನಗಳ ಕಾಲದಲ್ಲಿ ಬರೋಬ್ಬರಿ 132 ಎಕರೆ ವಿಸ್ತೀರ್ಣ ಹೊಂದಿದ್ದ ಈ ಕೆರೆ, ಕಾಲಕ್ರಮೇಣ ಒತ್ತುವರಿಯಾಗಿ 69 ಎಕರೆಗೆ ಕುಗ್ಗಿತ್ತು. 1962ರಲ್ಲಿ ವಿದ್ಯುತ್ ಗ್ರಿಡ್‌ಗಾಗಿ ಜಾಗ ಬಿಟ್ಟುಕೊಟ್ಟ ಬಳಿಕ ಈಗ ಕೆರೆಯ ಒಟ್ಟು ವಿಸ್ತೀರ್ಣ ಕೇವಲ 30 ಎಕರೆಗೆ ಬಂದು ತಲುಪಿದೆ. ಕೆರೆಯ ಜಾಗವನ್ನು ಕರಾರುವಾಕ್ಕಾಗಿ ಅಳತೆ (ಸರ್ವೇ) ಮಾಡಿಕೊಡುವಂತೆ ರೋಣ ತಾಲ್ಲೂಕು ಸರ್ವೇ ಅಧಿಕಾರಿಗಳಿಗೆ 2019-20ರಿಂದಲೂ ಗ್ರಾಮಸ್ಥರು ಮನವಿ ಮಾಡುತ್ತಲೇ ಇದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ. ಜಿ. ಹಿರೇಮಠ ಅವರು ಸೂಚನೆ ನೀಡಿದ್ದರೂ ಹಾಗೂ ಜನಪ್ರತಿನಿಧಿಗಳು ಹೇಳಿದರೂ ಸರ್ವೇ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಾರದೆ ನಿರಂತರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ