ಲಕ್ಷ್ಮೇಶ್ವರ: ಬೆಳೆ ಉಳಿವಿಗೆ ₹2 ಲಕ್ಷ ವೆಚ್ಚ

ಲಕ್ಷ್ಮೇಶ್ವರ: ಬೆಳೆ ಉಳಿವಿಗೆ ₹2 ಲಕ್ಷ ವೆಚ್ಚ

ಲಕ್ಷ್ಮೇಶ್ವರ: ಬೆಳೆ ಉಳಿವಿಗೆ ₹2 ಲಕ್ಷ ವೆಚ್ಚ

ಲಕ್ಷ್ಮೇಶ್ವರ: ಮುಂಗಾರು ಮಳೆ ಕೊರತೆಯಿಂದ ಇಡೀ ರೈತ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ₹2 ಲಕ್ಷ ಖರ್ಚು ಮಾಡಿದ ಲಕ್ಷ್ಮೇಶ್ವರದ ರೈತರೊಬ್ಬರು ಶ್ರಮವಹಿಸಿ, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ಬರೋಬ್ಬರಿ 400 ಟ್ಯಾಂಕರ್‌ ನೀರು ಹಾಯಿಸಿದ್ದರಿಂದ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ.

ಪಟ್ಟಣದ ರೈತ ಪ್ರಕಾಶ ಮುಳಗುಂದ ಎಂಬುವವರು ಪ್ರತಿ ವರ್ಷದಂತೆ ಮಳೆಯನ್ನೇ ನೆಚ್ಚಿಕೊಂಡು ನಾಲ್ಕು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮ ತೇವಾಂಶದ ಪರಿಣಾಮ ಬೆಳೆ ಚೆನ್ನಾಗಿ ಬೆಳೆದು ಹೂವು ಬಿಟ್ಟಿತ್ತು. ಇನ್ನೇನು ಕಾಯಿ ಬಿಡುವ ಹಂತದಲ್ಲಿದ್ದಾಗ ಮಳೆ ಕೈಕೊಟ್ಟಿತ್ತು. ಇದರಿಂದ ಹುಲುಸಾಗಿ ಬೆಳೆದು ನಿಂತಿದ್ದ ಮೆಣಸಿನಕಾಯಿ ಗಿಡಗಳು ಒಂದೊಂದಾಗಿ ಒಣಗ ತೊಡಗಿದ್ದವು.

ಕಣ್ಣೆದುರೇ ಮೆಣಸಿನಕಾಯಿ ಬೆಳೆ ಒಣಗುತ್ತಿರುವುದನ್ನು ಕಂಡ ಪ್ರಕಾಶ ಅವರು ಎದೆಗುಂದಲಿಲ್ಲ. ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳಬೇಕೆಂಬ ಪಣತೊಟ್ಟಿದ್ದರು. ತನ್ನ ಜಮೀನು ಪಟ್ಟಣದಿಂದ ಏಳೆಂಟು ಕಿ.ಮೀ. ದೂರದಲ್ಲಿತ್ತು. ಹೀಗಾಗಿ ಅವರು, ಬೆಳೆಗೆ ಟ್ಯಾಂಕರ್ ಮೂಲಕ ನೀರು ಹರಿಸಲು ನಿರ್ಧರಿಸಿದರು. ಸ್ನೇಹಿತರು, ಬಂಧುಗಳಿಂದ ಟ್ರ್ಯಾಕ್ಟರ್ ಬಾಡಿಗೆ ಪಡೆದು ಕೊಳವೆ ಬಾವಿಗಳಿಂದ ಒಟ್ಟಾರೆ 400 ಟ್ಯಾಂಕರ್‌ ನೀರನ್ನು ಖರೀದಿಸಿ, ಬೆಳೆಗೆ ಹರಿಸಿದ್ದಾರೆ. ನೀರಿಲ್ಲದೆ ಒಣಗುತ್ತಿದ್ದ ಬೆಳೆ ಸದ್ಯ ಮತ್ತೆ ಕಂಗೊಳಿಸುತ್ತಿದೆ.

ಮೆಣಸಿನಕಾಯಿಗೆ ಬಂಗಾರದ ಬೆಲೆ ನಿರೀಕ್ಷೆ: ಕೃಷಿ ವಲಯದಲ್ಲಿ ಕೆಂಪು ಬಂಗಾರ ಎಂದೇ ಕರೆಯಲ್ಪಡುವ ಮೆಣಸಿನಕಾಯಿ ದರ ಈ ವರ್ಷ ಒಂದು ಕ್ವಿಂಟಲ್‌ಗೆ ₹75 ಸಾವಿರ ಗಡಿ ದಾಟಿದೆ. ಇಳುವರಿ ಕುಂಠಿತ ಆಗಿದ್ದರಿಂದ ದರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನರಿತಿದ್ದ, ರೈತ ಪ್ರಕಾಶ ಅವರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗೆ ಬಾಡಿಗೆ ನೀರು ಹಾಯಿಸಿ, ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಳೆ ಕೊರತೆಯಿಂದ ಮೆಣಸಿನಕಾಯಿ ಆವಕ ಕಡಿಮೆಯಾಗಿದ್ದು, ಇದರ ಪರಿಣಾಮ ಬ್ಯಾಡಗಿ ಮಾರುಕಟ್ಟೆಯಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ದರ ಈಚೆಗೆ ಪ್ರತಿ ಕ್ವಿಂಟಲ್‌ಗೆ ₹77 ಸಾವಿರದ ಗಡಿ ದಾಟಿದೆ.

ಕಳೆದ ಕೆಲವು ದಿನಗಳಿಂದ ಮೆಣಸಿನಕಾಯಿ ದರ ಏರಿಕೆ ಹಾದಿಯಲ್ಲಿದೆ. ಗುಂಟೂರು ತಳಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹26,519 ದರದಲ್ಲಿ ಮಾರಾಟವಾಗಿದೆ. ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಸರಾಸರಿ ದರದಲ್ಲಿ ₹58,000 ಹಾಗೂ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ₹58,809 ದರದಲ್ಲಿ ಮಾರಾಟವಾಗಿದೆ.

ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದ ರೈತ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಹಣ ಸುರಿದಿದ್ದಾರೆ. ಇದರಿಂದ ಬೆಳೆಯು ಉತ್ತಮವಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ. ಅಂದುಕೊಂಡಂತೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಇನ್ನೂ ಹೆಚ್ಚಾದರೆ, ಸಾಕಷ್ಟು ಶ್ರಮವಹಿಸಿ ಬೆಳೆ ಉಳಿಸಿಕೊಂಡಿದ್ದಕ್ಕೆ ಉತ್ತಮ ಆದಾಯ ಸಿಗುತ್ತದೆ ಎಂದು ರೈತ ಪ್ರಕಾಶ ಅವರು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ