
ತ್ರಿವೇಣಿ ಸಂಗಮದಲ್ಲಿ ಭಕ್ತರ ದಂಡು, ಪಿತೃ ತರ್ಪಣ
ನಾಪೋಕ್ಲು: ಮಹಾಲಯ ಅಮಾವಾಸ್ಯೆ ದಿನವಾದ ಶನಿವಾರ ಕಾವೇರಿ, ಕನ್ನಿಕೆ ಹಾಗೂ ಗುಪ್ತಗಾಮಿನಿ ಸುಜ್ಯೋತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪಿತೃ ತರ್ಪಣ ಮತ್ತು ಪಿಂಡ ಪ್ರದಾನ ನೆರವೇರಿಸಲು ಶನಿವಾರ ಭಕ್ತರು ಕಿಕ್ಕಿರಿದು ಸೇರಿದ್ದರು.
ಕುಟುಂಬದ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಕೇಶ ಮುಂಡನದೊಂದಿಗೆ ಪವಿತ್ರ ಸ್ನಾನ ಮಾಡಿ, ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ಪಿತೃ ತರ್ಪಣ ನೆರವೇರಿಸಿದರು. ಕೊಡಗು ಜಿಲ್ಲೆಯ ವಿವಿಧ ಭಾಗಗಳು ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ಭಾಗಮಂಡಲದ ಭಗಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹಾಗೂ ತಲಕಾವೇರಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.