
ಮುಂಡರಗಿ ಅಂಚೆ ಕಚೇರಿ ಇಕ್ಕಟ್ಟು; ಸ್ವಂತ ಕಟ್ಟಡವಿಲ್ಲದೆ ಪರದಾಟ
ಮುಂಡರಗಿ: ಪಟ್ಟಣದ ಅಂಚೆ ಕಚೇರಿಯು ಕಿರಿದಾದ ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡವಿಲ್ಲದ ಕಾರಣ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಮೊದಲು ಅಂಚೆ ಕಚೇರಿಯು ಪಟ್ಟಣದ ಕಟ್ಟಡವೊಂದರ ಮಹಡಿಯಲ್ಲಿದ್ದ ಕೊಠಡಿಯಲ್ಲಿತ್ತು. ವೃದ್ಧರು, ಅಂಗವಿಕಲರು ಮಹಡಿ ಹತ್ತುವುದು ಕಷ್ಟಸಾಧ್ಯವಾಗಿತ್ತು. ಹಾಗಾಗಿ, ಬಾಡಿಗೆ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಈ ಕಟ್ಟಡಕ್ಕೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ. ಆದರೂ, 15ರಿಂದ 20 ಜನರು ಕಚೇರಿಯೊಳಗೆ ನಿಲ್ಲಲು ಆಗದಷ್ಟು ಇಕ್ಕಟ್ಟಾಗಿದೆ. ಕಚೇರಿಗೆ ಬರುವ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಮೊದಲಾದ ಸೌಲಭ್ಯ ಇಲ್ಲವಾಗಿದೆ.
ಅಂಚೆ ಕಚೇರಿಯು ಬ್ಯಾಂಕ್‌ನಂತೆ ಹಣಕಾಸಿನ ವ್ಯವಹಾರ ನಡೆಸುತ್ತಿರುವುದರಿಂದ, ಗ್ರಾಹಕರ ಸಂಖ್ಯೆ ಮೊದಲಿಗಿಂತಲೂ ಹೆಚ್ಚಾಗಿದೆ.
ಅಂಚೆ ಕಚೇರಿಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ದಶಕಗಳ ಹಿಂದೆ ಇಲ್ಲಿನ ಗದಗ ಮುಖ್ಯ ರಸ್ತೆಗೆ ಹೊಂದಿಕೊಂಡ ವಿಶಾಲವಾದ ನಿವೇಶನ ಖರೀದಿಸಲಾಗಿದೆ. ಅಲ್ಲಿ ಈಗ ಗಿಡ ಗಂಟಿಗಳು ಬೆಳೆದಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಈವರೆಗೆ ಸಾಧ್ಯವಾಗಿಲ್ಲ ಎಂಬುದು ಜನರ ಆರೋಪ.
‘ಕಚೇರಿಯಲ್ಲೇ ಆಧಾರ್ ನವೀಕರಣ’
ಮುಂಡರಗಿಯ ಅಂಚೆ ಕಚೇರಿಯಲ್ಲೇ ಆಧಾರ್ ನವೀಕರಣ ಕೇಂದ್ರ ತೆರೆಯಲಾಗಿದೆ. ಅಂಚೆ ಕಚೇರಿಯಲ್ಲಿನ ಕೆಲಸ ಸೇರಿದಂತೆ ಆಧಾರ್ ಕಾರ್ಡ್ ನವೀಕರಣಕ್ಕಾಗಿ ಹಲವರು ಕಚೇರಿಗೆ ಬರುತ್ತಾರೆ. ಇಕ್ಕಟ್ಟಾದ ಜಾಗದಲ್ಲಿ ಉಸಿರಾಡಲೂ ಆಗದಷ್ಟು ಸಮಸ್ಯೆ ಉಂಟಾಗುತ್ತಿದೆ. ಅಂಚೆ ಕಚೇರಿಯ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಆಧಾರ್ ನವೀಕರಣ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಜನರು ಕೋರಿದ್ದಾರೆ.