
ಜಗ್ಗುವವ ನಾನಲ್ಲ, ನಿಮ್ಮನ್ನು ಎದುರಿಸುವೆ: ಮಾಜಿ ಸಚಿವಗೆ ಪ್ರದೀಪ್ ಈಶ್ವರ್ ಟಾಂಗ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ.ಎಂ.ಸಿ ಸುಧಾಕರ್ ಅವರ ನಡುವಿನ ರಾಜಕೀಯ ಜಿದ್ದು ಮತ್ತಷ್ಟು ತೀವ್ರವಾಗುತ್ತಿದೆ.
ಈ ಹಿಂದಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ವಿರಸ ಈಗ ಖುಲ್ಲಂ ಖುಲ್ಲ ಎನ್ನುವಂತಾಗಿದೆ.
ಗುರುವಾರ ಚಿಂತಾಮಣಿಯಲ್ಲಿ ಪ್ರದೀಪ್ ಕರೆದಿದ್ದ ಮಾಧ್ಯಮಗೋಷ್ಠಿ ರದ್ದಾಗಿದೆ. ಎಕ್ಸ್ ನಲ್ಲಿ ಪರೋಕ್ಷವಾಗಿ ಡಾ.ಎಂ.ಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಪತ್ರಿಕಾಗೋಷ್ಠಿ ರದ್ದು ಮಾಡಿದ್ದೇನೆ. ಚಿಂತಾಮಣಿಯ ಯಾವುದೇ ಪ್ರಭಾವಿ ರಾಜಕಾರಣಿಯ ಒತ್ತಡದಿಂದಲ್ಲ ಎಂದು ಎಕ್ಸ್ ನಲ್ಲಿ ಪ್ರದೀಪ್ ತಿಳಿಸಿದ್ದಾರೆ.
ಪ್ರದೀಪ್ ಈಶ್ವರ್ ವಿರುದ್ಧವಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಕಾಂಗ್ರೆಸ್ ನಾಯಕರ ನಿಯೋಗದ ಜೊತೆಗೆ ತೆರಳಿ ಕೆಪಿಸಿಸಿ ಅಧ್ಯಕ್ಷರಿಗೆ ಡಾ.ಎಂ.ಸಿ ಸುಧಾಕರ್ ಸೋಮವಾರ ದೂರು ನೀಡಿದ್ದರು.
ಇದಕ್ಕೆ ಟಾಂಗ್ ಎನ್ನುವಂತೆ ಪ್ರದೀಪ್ ಈಶ್ವರ್ ಮಂಗಳವಾರ ಜಿಲ್ಲಾಧಿಕಾರಿಗೆ ಪತ್ರ ಬರೆದು, ಚಿಂತಾಮಣಿಯ ಊಲವಾಡಿಯಲ್ಲಿ ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ. ಚಿಂತಾಮಣಿ ನಗರದಲ್ಲಿ ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಲಾಗಿದೆ ಎಂದಿದ್ದರು. ಚಿಂತಾಮಣಿಯಲ್ಲಿ ಒಂದು ವರ್ಗವನ್ನು ಓಲೈಸಲಾಗುತ್ತಿದೆ ಎಂದಿದ್ದರು.
ಬುಧವಾರ ತಹಶೀಲ್ದಾರರು ಊಲವಾಡಿಗೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದರು. ದೇಗುಲ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದರು.
ಶಾಂತಿ ಮತ್ತು ಸಾಮರಸ್ಯ ಕದಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ವಿರುದ್ಧ ಚಿಂತಾಮಣಿಯಲ್ಲಿ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಗುರುವಾರ ಚಿಂತಾಮಣಿಯಲ್ಲಿ ಮಾಧ್ಯಮಗೋಷ್ಠಿ ನಡೆಸಲು ಪ್ರದೀಪ್ ಈಶ್ವರ್ ಮುಂದಾಗಿದ್ದರು. ಆದರೆ ಮಾಧ್ಯಮಗೋಷ್ಠಿ ರದ್ದಾಗಿದೆ.
ಪ್ರದೀಪ್ ಈಶ್ವರ್ ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ದೊರೆಯುವಲ್ಲಿ ಡಾ.ಎಂ.ಸಿ ಸುಧಾಕರ್ ಪಾತ್ರ ಪ್ರಮುಖವಾಗಿದೆ. ಗೆದ್ದ ನಂತರ ಸುಧಾಕರ್ ಅವರನ್ನು ನನ್ನ ರಾಜಕೀಯ ಗುರು, ಅಣ್ಣ ಎನ್ನುತ್ತಿದ್ದರು. ಆದರೆ ಈ ಇಬ್ಬರ ನಡುವೆ ರಾಜಕೀಯ ಹಗೆ ಹೆಚ್ಚುತ್ತಿದೆ.
ಡಾ.ಎಂ.ಸಿ ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪಾಲ್ಗೊಳ್ಳುತ್ತಿದ್ದ ಸರ್ಕಾರಿ ಕಾರ್ಯಕ್ರಮಗಳು, ಕೆಡಿಪಿ ಸಭೆಗಳಿಂದಲೂ ಪ್ರದೀಪ್ ದೂರವುಳಿದಿದ್ದರು.