
ಮುಳಬಾಗಿಲು ಬಳಿ ರೈತರ ದಾರಿ ಮುಚ್ಚಿದ ಉದ್ಯಮಿ; ಪ್ರತಿಭಟನೆ
ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಯಹಳ್ಳಿ ಗ್ರಾಮದ ಬಳಿ ಬೆಂಗಳೂರಿನ ಉದ್ಯಮಿಯೊಬ್ಬರು ರೈತರು ಹೊಲ ಗದ್ದೆಗಳಿಗೆ ಹೋಗುತ್ತಿದ್ದ ದಾರಿಯನ್ನು ಮುಚ್ಚಿಹಾಕಿದ್ದು, ಕೇಳಿದರೆ ದೌರ್ಜನ್ಯ ಮಾಡುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ನ್ಯಾಯ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಮುಚ್ಚಿ ಹಾಕಿರುವ ರಸ್ತೆ ಬಳಿ ಅನೇಕ ಮಂದಿ ರೈತರು ರಸ್ತೆ ಬಿಡುವಂತೆ ಮನವಿ ಮಾಡಿದರೂ ರಸ್ತೆಯನ್ನು ಬಿಡದ ಕಾರಣ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು.
ಸುಮಾರು 70 ವರ್ಷಗಳಿಂದ ಬಳಸುತ್ತಿದ್ದ ಹಾಗೂ ನರೇಗಾ ಅನುದಾನದಲ್ಲಿ ನಿರ್ಮಾಣವಾಗಿದ್ದ ರಸ್ತೆಯನ್ನು ಉದ್ಯಮಿ ಏಕಾಏಕಿ ಜೆಸಿಬಿಯಿಂದ ನಾಶಪಡಿಸಿದ್ದಾರೆ. ಜೊತೆಗೆ ರಸ್ತೆ ಜಾಗವನ್ನು ಸೇರಿಸಿ ಪೆನ್ಸಿಂಗ್ ಅಳವಡಿಸಿದ್ದು, ನಾನು ಖರೀದಿಸಿರುವ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ರೈತರು ಹೊಲಗಳಿಗೆ ಹೋಗಲು ಪರದಾಡುವಂತಾಗಿದೆ. ಹಾಗಾಗಿ ತಹಶೀಲ್ದಾರ್ ಭೇಟಿ ನೀಡಿ ರಸ್ತೆಯನ್ನು ಬಿಡಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ಹೈದರ್ ಸಾಬ್, ನಂದೀಶ್ ಕುಮಾರ್, ದೇವರಾಜ್, ಪ್ರಭಾಕರ್, ಭಾನು ಮುರಳಿ, ಅಬ್ದುಲ್, ಸುದರ್ಶನ್, ಸೀನಪ್ಪ, ಗೌವಪ್ಪ, ಗಣಪತಿ, ಗಂಗಾಧರ್, ಚೌಡಪ್ಪ, ಸುಬ್ರಮಣಿ, ನಾರಾಯಣಪ್ಪ, ಅಪ್ಪು ಮತ್ತಿತರರು ಭಾಗವಹಿಸಿದ್ದರು.
ಜೆಸಿಬಿ ಯಂತ್ರದಿಂದ ರಸ್ತೆ ನಾಶ ಪಡಿಸಿರುವ ಕುರಿತು ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಈಗಾಗಲೇ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿಯನ್ನು ಕಳುಹಿಸಲಾಗಿದ್ದು, ಮಾಹಿತಿ ಪಡೆದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.