
ಪ್ರಜ್ವಲ್ ರೇವಣ್ಣ ಸ್ಥಳಾಂತರಕ್ಕೆ ಕೊನೆ ಕ್ಷಣದ ಬ್ರೇಕ್: ಮಧ್ಯರಾತ್ರಿಯೇ ವಾಪಸ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಕೊನೆ ಕ್ಷಣದಲ್ಲಿ ರದ್ದಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಜೈಲು ನಿಯಮ ಉಲ್ಲಂಘನೆ ಮಾಡಿದ ಕಾರಣ ಅಪರಾಧಿಯನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಲಾಗಿತ್ತು. ಅದರನ್ವಯ ಭಾನುವಾರ ತಡರಾತ್ರಿ ಪ್ರಜ್ವಲ್‌ನನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸ್ ಬೆಂಗಾವಲು ವಾಹನದಲ್ಲಿ ಬೆಳಗಾವಿಗೆ ಕರೆದೊಯ್ಯಲಾಗುತ್ತಿತ್ತು.
ಮೂಲಗಳ ಪ್ರಕಾರ, ಬೆಂಗಾವಲು ವಾಹನ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗಡಿ ದಾಟಿತ್ತು. ಮಾರ್ಗ ಮಧ್ಯೆ ಸರ್ಕಾರದ ಪ್ರಭಾವಿ ನಾಯಕರೊಬ್ಬರು ಜೈಲಿನ ಮುಖ್ಯಸ್ಥರಿಗೆ ಕರೆ ಮಾಡಿ ಕೂಡಲೇ ಆತನನ್ನು ವಾಪಸ್ ಕರೆತರುವಂತೆ ಸೂಚಿಸಿದ್ದಾರೆ. ಅದರಂತೆ ಜೈಲಿನ ಹಿರಿಯ ಅಧಿಕಾರಿ, ಸಿಎಆರ್ ಭದ್ರತಾ ಸಿಬ್ಬಂದಿ ಹಾಗೂ ಜೈಲಿನ ಅಧಿಕಾರಿಗೆ ಕರೆ ಮಾಡಿ, ಕೂಡಲೇ ವಾಪಸ್ ಕರೆತರುವಂತೆ ಆದೇಶಿಸಿದ್ದಾರೆ. ಶಿರಾದಿಂದ ಮತ್ತೆ ವಾಹನವನ್ನು ಬೆಂಗಳೂರಿನತ್ತ ತಿರುಗಿಸಿ, ಬೆಳಗಿನ ಜಾವ 3 ಗಂಟೆ ವೇಳೆಗೆ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೇ ವಾಪಸ್ ಕರೆತಂದು ಒಪ್ಪಿಸಲಾಗಿದೆ.
ಮತ್ತೊಂದೆಡೆ ಪ್ರಜ್ವಲ್ ರೇವಣ್ಣನನ್ನು ಸ್ಥಳಾಂತರ ಮಾಡಲು ನ್ಯಾಯಾಲಯದ ಅನುಮತಿ ಪಡೆದಿರರಿಲ್ಲ. ಒಂದು ವೇಳೆ ಬೆಳಗಾವಿ ಜೈಲಿಗೆ ಸ್ಥಳಾಂತರಿಸಿದರೆ ಪ್ರತಿ ವಿಚಾರಣೆಗೂ ಬೆಂಗಳೂರಿಗೆ ಕರೆತರುವುದು ಭದ್ರತೆ ಮತ್ತು ತಾಂತ್ರಿಕ ದೃಷ್ಟಿಯಿಂದ ಕಷ್ಟವಾಗಲಿದೆ ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ವಾಪಸ್ ಬೆಂಗಳೂರಿನ ಜೈಲಿನಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣನನ್ನು 25ಕ್ಕೂ ಹೆಚ್ಚು ಕೈದಿಗಳಿರುವ ಬ್ಯಾರಕ್‌ನಲ್ಲಿ ಇರಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.