
ರಾಜ್ಯದ ಹಣಕಾಸು ಸ್ಥಿತಿ: ಶ್ವೇತಪತ್ರ ಹೊರಡಿಸಲು ವಿಜಯೇಂದ್ರ ಆಗ್ರಹ
ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಹರ್ಷಿ ವಾಲ್ಮೀಕಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ‘ಬಿಜೆಪಿ ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿದರು.
ದೇವರಗುಡಿಪಲ್ಲಿ (ಗಡಿದಂ) ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಡಾ.ಎಚ್.ಎನ್.ವೃತ್ತದಿಂದ ಕುಂಬಾರಪೇಟೆ, ಬಸ್ ನಿಲ್ದಾಣದ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಕ್ರೇನ್ ಮೂಲಕ ಸೇಬಿನ ಹಾರ ಹಾಕಿದರು. ಅಲಂಕೃತ ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿ ಓಡಿಸಿದರು. ಬಸ್ ನಿಲ್ದಾಣದಿಂದ ಟಿ.ಬಿ ಕ್ರಾಸ್ ಸೂರ್ಯ ಕನ್ವೆಷನ್ ಹಾಲ್‌ವೆರೆಗೆ ಪಾದಯಾತ್ರೆ ನಡೆಸಿದರು.
ನಂತರ ಮಾತನಾಡಿದ ವಿಜಯೇಂದ್ರ, ‘ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿ ಈಗ ದಾಖಲೆ ಕೇಳಿ ಜನರಿಗೆ ಮೋಸ ಮಾಡುತ್ತಿದೆ. ಅಕ್ಕಿ ನೀಡಲು ಹಣ ಇಲ್ಲದೆ ಲಕ್ಷಾಂತರ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕ ಸಂಕಷ್ಟದಲ್ಲಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ ಹಣ, ವಿಧವೆಯರಿಗೆ, ಅಂಗವಿಕಲರಿಗೆ ಮಾಶಾಸನ ನೀಡಲಾರದಷ್ಟು ದಿವಾಳಿಯಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
‘ಕಳೆದ 3 ವರ್ಷಗಳಲ್ಲಿ ₹55,000 ಕೋಟಿ ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಲಾಗಿದೆ. ಈ ಜನವಿರೋಧಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು. ಬರ ಪರಿಹಾರದಲ್ಲಿ ಪ್ರತಿ ಹೆಕ್ಟರ್‌ಗೆ ₹50 ಸಾವಿರ ವಿತರಿಸಬೇಕು. ರೈತರ ಸಾಲಮನ್ನಾ ಮಾಡಬೇಕು. ಏಳು ತಾಸು ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಆಗ್ರಹಿಸಿದರು.
‘ರಾಹುಲ್ ಗಾಂಧಿ ಹತಾಶರಾಗಿ, ಚುನಾವಣಾ ಆಯೋಗದ ಮೇಲೆ ಇಲ್ಲ–ಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳನ್ನು ಸಹಿಸಲಾಗದೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ‘ಪ್ರಧಾನಿ ಮೋದಿ ಅವರ ಕಾರ್ಯ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಜನಜಾಗೃತಿ ಮೂಡಿಸಲಾಗುವುದು. ಕ್ಷೇತ್ರದ ಶಾಸಕರು ಸರ್ಕಾರಿ ಭೂಮಿ, ಗೋಮಾಳ, ಅರಣ್ಯ ಭೂಮಿ, ದಲಿತರ ಭೂಮಿ ಕಬಳಿಸಿ ಬೇನಾಮಿ ಹೆಸರಿನಲ್ಲಿಟ್ಟಿದ್ದಾರೆ. ಸಮಗ್ರ ತನಿಖೆ ಆಗಬೇಕು. ಕೃಷ್ಣಾ ನದಿ ನೀರನ್ನು ಕ್ಷೇತ್ರಕ್ಕೆ ಹರಿಸಬೇಕು. 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ವಿಜಯೇಂದ್ರ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಕಟಪೂರ್ವ ಅಧ್ಯಕ್ಷ ರಾಮಲಿಂಗಪ್ಪ, ‘ಮೋದಿ ಜನಪರ ಯೋಜನೆಗಳು ಕಟ್ಟಕಡೆ ಪ್ರಜೆಗಳಿಗೆ ಸಿಗಬೇಕು. ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟಿಸಬೇಕು’ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್‍ಗೌಡ, ವಿಭಾಗ ಪ್ರಭಾರ ಬ್ಯಾಟರಂಗೇಗೌಡ, ಸಹಪ್ರಭಾರ ಎಂ.ಕೆ.ವಾಸುದೇವ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿರ್ಮಲಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ ಮಂಡಲ ಅಧ್ಯಕ್ಷ ಗೆಂಗಿರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷ ಮಂಜುಳಮ್ಮ ಮತ್ತಿತರರು ಇದ್ದರು.