
ವಿಡಿಯೊ: ಡಾ.ರಾಜ್ ಕುಮಾರ್ ‘ಕಾಮನ ಬಿಲ್ಲು’ ಯೋಗ ದೃಶ್ಯಗಳಿಗೆ ಭಾರಿ ಮೆಚ್ಚುಗೆ
ವರನಟ ಡಾ. ರಾಜ್‌ಕುಮಾರ್ ಅವರ ಜನಪ್ರಿಯ ಸಿನಿಮಾಗಳಲ್ಲಿ ‘ಕಾಮನಬಿಲ್ಲು’ ಒಂದಾಗಿದೆ. ಈ ಸಿನಿಮಾದ ಆರಂಭದಲ್ಲಿ ಅವರು ಯೋಗ ಮಾಡುವ ದೃಶ್ಯಗಳಿವೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಭಿಮಾನಿಗಳು ಸೇರಿದಂತೆ, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನ ಬಳಕೆದಾರರೊಬ್ಬರು ಸೆಪ್ಟೆಂಬರ್ 30ರಂದು ಈ ವಿಡಿಯೊದ ತುಣುಕನ್ನು ಹಂಚಿಕೊಂಡಿದ್ದರು. ಇದೀಗ ಈ ವಿಡಿಯೊ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಮಾತ್ರವಲ್ಲ, 1,000ಕ್ಕೂ ಹೆಚ್ಚು ಬುಕ್‌ಮಾರ್ಕ್ ಹಾಗೂ ಸಾವಿರಾರು ಲೈಕ್ಸ್ ಮತ್ತು ಕಮೆಂಟ್‌ಗಳು ಬಂದಿವೆ.
ಎಲ್ಲರಿಗೂ ತಿಳಿದಿರುವಂತೆ ಡಾ.ರಾಜ್‌ಕುಮಾರ್ ಅವರು ಯೋಗದಲ್ಲಿ ವಿಶೇಷ ಪರಿಣಿತಿ ಪಡೆದುಕೊಂಡಿದ್ದರು. ಅವರು ಚಿತ್ರೀಕರಣದ ಸೆಟ್‌ನಲ್ಲಿಯೇ ಬೆಳಿಗ್ಗೆ ಬೇಗ ಎದ್ದು ಯೋಗಾಸನ ಮಾಡುತ್ತಿದ್ದ ಹಲವು ಉದಾಹರಣೆಗಳಿವೆ.
ಈ ವಿಡಿಯೊದಲ್ಲಿ ಡಾ. ರಾಜ್‌ಕುಮಾರ್ ಅವರು ಲಂಗೋಟಿ ಧರಿಸಿ ವಿವಿಧ ಕಠಿಣ ಆಸನಗಳನ್ನು ಆರಾಮವಾಗಿ ಮಾಡುತ್ತಿದ್ದಾರೆ. ಜತೆಗೆ, ಮೂಗಿನ ಹೊಳ್ಳೆಗಳನ್ನು ಶುದ್ಧೀಕರಿಸುವ ಪ್ರಾಚೀನ ಯೋಗ ಪದ್ಧತಿ ‘ಜಲ ನೇತಿ’ ಮಾಡುವುದನ್ನೂ ಕಾಣಬಹುದು.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ‘ಹೆಚ್ಚಿನವರು ವಯಸ್ಸಾದ ಮೇಲೆ ವಿಶ್ರಾಂತಿ ಪಡೆಯಲು ಯೋಚಿಸಿದರೆ, ಅಣ್ಣಾವ್ರು ಕಠಿಣವಾದ ಆಸನಗಳನ್ನು ಸುಲಭವಾಗಿ ಮಾಡುತ್ತಿದ್ದರು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ‘ಅಣ್ಣಾವ್ರು ವೃತ್ತಿಪರ ಯೋಗಪಟು. ನಂತರ ನಟರಾದರು’ ಎಂದು ಬರೆದುಕೊಂಡಿದ್ದಾರೆ.
1983ರಲ್ಲಿ ‘ಕಾಮನಬಿಲ್ಲು’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಅವರು ಯೋಗ ಮಾಡುವ ದೃಶ್ಯವನ್ನು ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ಚಿತ್ರೀಕರಿಸಲಾಗಿತ್ತು. ಆ ಸಮಯದಲ್ಲಿ ಚಿತ್ರತಂಡ ಚಳಿಯಲ್ಲಿ ನಡುಗುತ್ತಿದ್ದರೆ, ರಾಜ್‌ಕುಮಾರ್ ಅವರು ಮಾತ್ರ ಅತ್ಯಂತ ಆರಾಮವಾಗಿ ಯೋಗಾಸನ ಮಾಡುತ್ತಿದ್ದರು.
ಈ ಸಿನಿಮಾವನ್ನು ಚಿ. ದತ್ತರಾಜ್ ನಿರ್ದೇಶಿಸಿದ್ದು, ಪ್ರಮುಖ ಪಾತ್ರದಲ್ಲಿ ಸರಿತಾ ಹಾಗೂ ಅನಂತ್‌ನಾಗ್ ನಟಿಸಿದ್ದಾರೆ. ವರದಿಗಳ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ಡಾ. ರಾಜ್‌ಕುಮಾರ್ ಅವರು 40ರ ದಶಕದಲ್ಲೇ ಯೋಗಾಸನ ಅಭ್ಯಾಸ ಮಾಡಲು ಆರಂಭಿಸಿದರು. ಆ ಬಳಿಕ ಯೋಗವು ಅವರ ಜೀವನದ ಅವಿಭಾಜ್ಯ ಅಂಗವಾಯಿತು.