
ಕೋಲಾರ ದೇವಸ್ಥಾನಕ್ಕೆ ಸೇರಿದ್ದ ನೀಲಗಿರಿ ಮರಗಳ ಅಕ್ರಮ ಕಟಾವು
ಬೇತಮಂಗಲ: ಹೋಬಳಿಯ ಬಂಗಾರು ತಿರುಪತಿ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಟಾವು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೇವಸ್ಥಾನ ಜಮೀನಿನ ಸಮೀಪದಲ್ಲಿ ಸಾಗುವಳಿ ಮಾಡುತ್ತಿರುವ ರೈತರೊಬ್ಬರು ದೇವಸ್ಥಾನದ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಕಟಾವು ಮಾಡಿಸಿ, ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ್ದಾರೆಂದು ಅಂಬೇಡ್ಕರ್ ವೀರಸೇನೆಯ ಸಂಸ್ಥಾಪಕ ಅಧ್ಯಕ್ಷ ಭಟ್ರಕುಪ್ಪ ಅರುಣ್ ಆರೋಪಿಸಿದ್ದಾರೆ.
ಮರಗಳ ಕಟಾವು ಗಮನಿಸಿ ಅರುಣ್ ತಕ್ಷಣ ಸ್ಥಳಕ್ಕೆ ತೆರಳಿ ಆ ಕಾರ್ಯವನ್ನು ತಡೆದು, ಈ ವಿಚಾರವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮವಾಗಿ ಕಟಾವು ಮಾಡಿರುವ ನೀಲಗಿರಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ. ಅದನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿ ಖಾತೆಗೆ ಜಮಾ ಮಾಡಲಾಗುವುದು. ಜೊತೆಗೆ ಪೊಲೀಸರಿಗೆ ರೈತರ ವಿರುದ್ಧ ದೂರು ನೀಡಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.