
ನದಿದಂಡೆಯಲ್ಲಿ ಮರಳು ಅಕ್ರಮ ಗಣಿಗಾರಿಕೆ: ವರದಿ ಕೇಳಿದ ಸುಪ್ರೀಂ ಕೋರ್ಟ್
ನವದೆಹಲಿ: ನದಿದಂಡೆಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವರದಿ ನೀಡುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿಗೆ(ಸಿಇಸಿ) ಸೂಚಿಸಿರುವ ಸುಪ್ರೀಂ ಕೋರ್ಟ್, ನದಿ ಪರಿಸರ ವ್ಯವಸ್ಥೆಯ ಮೇಲೆ ಇದು ವಿನಾಶಕಾರಿ ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯಬೇಕು ಎಂದು ಮಂಗಳವಾರ ಹೇಳಿದೆ.
ವ್ಯಾಪಕವಾದ ಮರಳಿನ ಅಕ್ರಮ ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಛಂಬಲ್ ಘರಿಯಲ್ ಅಭಯಾರಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಪರಿಸರ ಮತ್ತು ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸಿರುವ ಬಗ್ಗೆ ಎರಡು ವಾರಗಳ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನ್ಯಾಯಪೀಠ ಸೂಚಿಸಿದೆ.
‘ರಾಷ್ಟ್ರೀಯ ಛಂಬಲ್ ಅಭಯಾರಣ್ಯದಲ್ಲಿ ಮರಳು ಅಕ್ರಮ ಗಣಿಗಾರಿಕೆ ಮತ್ತು ಅಳಿವಿನಂಚಿನಲ್ಲಿರುವ ಜಲಚರ ಗಳಿಗೆ ಉಂಟಾಗುತ್ತಿರುವ ಅಪಾಯ’ ಎಂಬ ಹೆಸರಿನಡಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಸ್ವಯಂಪ್ರೇರಿತ ಪ್ರಕರಣದ ಜೊತೆಗೆ ವಿಚಾರಣೆಗೆ ಪಟ್ಟಿಯಾಗಿದ್ದ ಮತ್ತೊಂದು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಕೆನ್ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
‘ರಾಜ್ಯದ ನದಿಗಳು ಈ ರೀತಿಯಾಗಿ ನಾಶವಾಗುವುದನ್ನುನಾವು ಸಹಿಸುವುದಿಲ್ಲ. ಇದು ನಡೆಯಲೇಬಾರದು. ಇದು ದುರದೃಷ್ಟಕರ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿತು.