
ನೀರಿಲ್ಲದೆ ಕಳೆಗುಂದಿವೆ ನೇತ್ರಾವತಿ ಉಪನದಿಗಳು: ರೈತರಲ್ಲಿ ಆತಂಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ಉಪನದಿಗಳು ಬತ್ತಿಹೋಗುತ್ತಿದ್ದು, ನದಿಬದಿಯ ಗದ್ದೆ ತೋಟಗಳೂ ಒಣಗುತ್ತಿವೆ. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಜೀವಜಲದ ಕೊರತೆ ಎದುರಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಬರ ಪೀಡಿತ ತಾಲ್ಲೂಕು ಎಂದು ರಾಜ್ಯ ಸರ್ಕಾರದಿಂದ ಘೋಷಣೆಯಾಗಿರುವ ಬೆಳ್ತಂಗಡಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಅದರಲ್ಲೂ ಚಾರ್ಮಾಡಿ ಘಾಟಿಯ ತಪ್ಪಲು, ಮಲವಂತಿಗೆ, ದಿಡುಪೆ ಭಾಗದಲ್ಲಿರುವ ಪಶ್ಚಿಮಘಟ್ಟದ ತಪ್ಪಲಲ್ಲಿ ಮಳೆಯ ಪ್ರಮಾಣ ಕ್ಷೀಣವಾಗಿತ್ತು. ಇದರಿಂದಾಗಿ ಇಲ್ಲಿನ ಹಳ್ಳ, ತೊರೆಗಳು ಬೆರಳೆಣಿಕೆಯಷ್ಟು ಬಾರಿ ಮಾತ್ರ ತುಂಬಿ ಹರಿದಿವೆ. ಇದರಿಂದಾಗಿ ತಪ್ಪಲು ಪ್ರದೇಶದಲ್ಲಿ ನೀರಿನ ಒರತೆಯೇ ಸಮರ್ಪಕವಾಗಿ ಆಗಿಲ್ಲ.
ಚಾರ್ಮಾಡಿ ಘಾಟಿಯ ರಸ್ತೆಬದಿಯಲ್ಲಿ ಸೆಪ್ಟೆಂಬರ್– ಅಕ್ಟೋಬರ್‌ವರೆಗೂ ನೀರಿನ ಹರಿವು ಕಾಣಸಿಗುತ್ತಿತ್ತು. ಆದರೆ, ಈ ಬಾರಿ ಮಳೆ ಕಡಿಮೆಯಾಗುತ್ತಿದ್ದಂತೆ ನೀರಿನ ಹರಿವೂ ಬತ್ತಿ ಹೋಗಿದೆ. ಘಾಟಿಯಲ್ಲಿ ಧುಮ್ಮಿಕ್ಕುತ್ತಿದ್ದ ಹಲವು ಝರಿಗಳು ಈಗ ತೊಟ್ಟಿಕ್ಕುತ್ತಿವೆ. ಬೆಟ್ಟದ ಮೇಲಿನಿಂದ ಹರಿಯುವ ಹಲವು ತೊರೆಗಳಲ್ಲಿ ನೀರು ಹರಿಯುವಾಗ ಕಾಣಸಿಗುತ್ತಿದ್ದ ಬೆಳ್ನೊರೆಯೂ ಮಾಯವಾಗಿ ತಳಕಾಣುತ್ತಿದೆ.
ಬಾವಿಯಲ್ಲೂ ತಳಕಂಡ ನೀರು: ಚಾರ್ಮಾಡಿ ಘಾಟಿಗಿಂತ ಕೆಳಗಿನ ಪ್ರದೇಶದಲ್ಲಷ್ಟೇ ಈ ಬಾರಿ ಸಾಧಾರಣ ಮಳೆಯಾಗಿದೆ. ಆದರೆ, ಘಾಟಿ ಪ್ರದೇ ಶದಲ್ಲಿ ಮಳೆ ಆಗದೆ ಇರುವು ದರಿಂದ ನೀರಿನ ಒರತೆಯೇ ಸ ಮರ್ಪಕವಾಗಿ ಆಗಿಲ್ಲ. ನಮ್ಮ 20 ಅಡಿಯ ಬಾವಿಯಲ್ಲಿ ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ನೀರು ತುಂಬಿರುತ್ತಿತ್ತು. ಆದರೆ, ಈ ಬಾರಿ ಅರ್ಧಕ್ಕಿಂತಲೂ ಕೆಳಗಿದೆ. ಇಲ್ಲೇ ಹರಿ ಯುವ ಮೃತ್ಯುಂಜಯ ನದಿಯನ್ನು ಈ ಸಂದರ್ಭದಲ್ಲಿ ದಾಟಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಪಾದವೂ ಮುಳುಗುವುದಿಲ್ಲ. ಈ ಬಾರಿ ನವೆಂಬರ್‌ಗೂ ಮೊದಲೇ ತೋಟಗಳಿಗೆ ನೀರು ಹಾಯಿಸಬೇಕಾದ ಪರಿಸ್ಥಿತಿ ಇದೆ. ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಕಡಿಮೆ ಆಗಿದ್ದು, ವಿದ್ಯುತ್‌ನ ಕೊರತೆಯೂ ಈ ಬಾರಿ ಉಂಟಾಗಬಹುದು ಎಂಬ ಭಯ ಇದೆ ಎಂದು ಚಾರ್ಮಾಡಿ ಹೊಸಗದ್ದೆಯ ರೈತರಾದ ನಾರಾಯಣ, ಮಹೇಶ್ ಆತಂಕ ವ್ಯಕ್ತಪಡಿಸಿದರು.
ಜಾನುವಾರುಗಳಿಗೂ ತೊಂದರೆ: ದಿಡುಪೆ ಭಾಗದಲ್ಲಿ ಅನೇಕ ರೈತರು ಹೈನುಗಾರಿಕೆ ನಡೆಸುತ್ತಿದ್ದು, ಜಾನುವಾ ರುಗಳಿಗೆ ಕುಡಿಯಲು, ಅವುಗಳ ಮೈತೊಳೆಯಲು ಹೆಚ್ಚು ನೀರು ಬೇಕಾಗುತ್ತದೆ. ಈ ಬಾರಿ ನೀರಿನ ಕೊರತೆ ಯಿಂದಾಗಿ ಹೈನುಗಾರಿಕೆಗೂ ತೊಂದರೆ ಆಗಲಿದೆ. ಇದರಿಂದಾಗಿ ಅದಾ ಯಕ್ಕೂ ಕೊರತೆ ಆಗಲಿದೆ ಎಂಬುದು ಮಲವಂತಿಗೆಯ ಮನ್ಮಥ ಸೇರಿದಂತೆ ಹಲವು ಹೈನುಗಾರರ ಅಳಲು.
ನೇತ್ರಾವತಿಯ ಉಪನದಿಗಳಾದ ಬೆಳ್ತಂಗಡಿ ಪಟ್ಟಣದ ಬಳಿ ಹರಿಯುವ ಸೋಮಾವತಿ ನದಿ, ಮುಂಡಾಜೆಯ ಮೂಲಕ ಹರಿಯುವ ಮೃತ್ಯುಂಜಯ ನದಿಯ ಬದಿಯ ಕಸವೂ ಸಂಪೂರ್ಣ ವಾಗಿ ಕೊಚ್ಚಿಕೊಂಡು ಹೋಗಿಲ್ಲ. ಅಂಥ ಮಳೆಯೇ ಬಂದಿಲ್ಲ. ನಮ್ಮ ತೋಟ ನದಿಯ ಪಾತ್ರದಲ್ಲೇ ಇದ್ದರೂ ಈ ಬಾರಿ ನಾವೂ ಬೇಗನೇ ನೀರು ಹಾಯಿಸಬೇಕಾಗಬಹುದು. ಈ ಬಾರಿ ಭೀಕರ ಬರಗಾಲ ಸ್ಥಿತಿ ಎದುರಾಗಿದೆ ಎಂಬುದು ಮುಂಡಾಜೆಯ ಕೃಷಿಕ ಎಲ್ಯಣ್ಣ ಅವರ ಅಳಲು.
ಮಧ್ಯಮ ಸ್ತರದ ಭಾರಿ ಮೋಡಗಳು ಪಶ್ಚಿಮ ಘಟ್ಟದ ಸಾಲುಗಳಲ್ಲಿ ತಡೆದು ದರಿಂದ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮುನ್ಸೂಚನೆಗೂ ಮೀರಿ ಭಾರಿ ಮಳೆಯಾಗಿತ್ತು. ಆದರೆ, ಘಟ್ಟದ ತಪ್ಪಲಲ್ಲಿ ನೀರಿನ ಒರತೆ ಆಗುವಂಥ ಭಾರಿ ಮಳೆ ನಿರಂತರವಾಗಿ ಬಿದ್ದಿಲ್ಲ ಎಂಬುದು ಹವಾಮಾನ ಗಮನಿಸುವವರ ಅಭಿಪ್ರಾಯ.
ಬಾವಿಯಲ್ಲಿ ಕೊಡವೂ ಮುಳುಗುತ್ತಿಲ್ಲ...
ದಿಡುಪೆ ಮೂಲಕ ಹರಿಯುವ, ಈ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿಯ ಉಪನದಿಯಲ್ಲೂ ತಳ ಕಾಣುತ್ತಿದೆ. ಕಳೆದ ಬಾರಿ ಬೇಸಿಗೆಯಲ್ಲಿ ಹಲವು ಕಡೆ ನಿರ್ಮಿಸಿದ್ದ ಒಡ್ಡುಗಳನ್ನು ಇದುವರೆಗೂ ತೆರವು ಮಾಡಿಲ್ಲ. ತೆರವು ಮಾಡುವಂಥ ಅಥವಾ ಒಡ್ಡನ್ನು ಕೊಚ್ಚಿಕೊಂಡು ಹೋಗುವಂಥ ಮಳೆಯೇ ಬಂದಿಲ್ಲ. ಇದರಿಂದಾಗಿ ನಮ್ಮ ಮನೆ ಬಳಕೆಯ ಬಾವಿಯಲ್ಲಿ ನೀರೇ ಬತ್ತಿಹೋಗಿದೆ. ಮಾರ್ಚ್, ಏಪ್ರಿಲ್‌ನಲ್ಲಿ ಆಗುತ್ತಿದ್ದ ಪರಿಸ್ಥಿತಿ ಈಗಲೇ ಬಂದೊದಗಿದೆ. ನಾವು ಪಕ್ಕದ ಮನೆಯವರ ಬಾವಿಯಿಂದ ಕುಡಿಯಲು ಹಾಗೂ ಅಡುಗೆಗೆ ನೀರು ತರುತ್ತಿದ್ದೇವೆ ಎನ್ನುತ್ತಾರೆ ದಿಡುಪೆಯ ನಾರಾಯಣ ಗೌಡ.