
ದಕ್ಷಿಣ ಕನ್ನಡ ಜಿಲ್ಲಾ 12ನೇ ಗಮಕ ಸಮ್ಮೇಳನ ಅ.24ರಿಂದ
ಉಜಿರೆ: ಕರ್ನಾಟಕ ರಾಜ್ಯ ಗಮಕ ಕಲಾಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಗಮಕ ಪರಿಷತ್ತು ಮತ್ತು ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಅ.24 ಮತ್ತು ಅ.25ರಂದು ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಸಭಾಭವನದಲ್ಲಿ ದಕ್ಷಿಣಕನ್ನಡ ಜಿಲ್ಲಾ 12ನೇ ಗಮಕ ಸಮ್ಮೇಳನ ನಡೆಯಲಿದೆ.
ವಿವಿಧ ಸಮಿತಿಗಳನ್ನು ರಚಿಸಿದ್ದು ಸಿದ್ಧತೆಗಳು ನಡೆಯುತ್ತಿವೆ. ಹಿರಿಯ ಗಮಕಿ, ಧರ್ಮಸ್ಥಳ ಗ್ರಾಮದ ನಿವಾಸಿ ಜಯರಾಮ ಕುದ್ರೆತ್ತಾಯ ಅವರು 12ನೇ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಯರಾಮ ಕುದ್ರೆತ್ತಾಯ ಅವರು ಧರ್ಮಸ್ಥಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣ ಪೂರೈಸಿದ ಬಳಿಕ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿ ದರು. ಬಾಲ್ಯದಲ್ಲಿಯೇ ಅವರಿಗೆ ಚೆಂಡೆ, ಮದ್ದಲೆ ಯಲ್ಲಿ ವಿಶೇಷ ಆಸಕ್ತಿ ಇತ್ತು. ಯಕ್ಷಗಾನ ಬಯಲಾಟ ಪ್ರದ ರ್ಶನ, ನಾಟಕಪ್ರದರ್ಶನ, ಹರಿಕಥಾಕಾಲಕ್ಷೇಪ, ಪ್ರತಿವರ್ಷ ಮಳೆಗಾಲದಲ್ಲಿ ಎರಡು ತಿಂಗಳು ಪುರಾಣ ವಾಚನ-ಪ್ರವಚನ, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ತರಬೇತಿ ಕೇಂದ್ರ, ಆಟ-ಕೂಟ, ತಾಳಮದ್ದಲೆ ಅವರ ಕಲಾಪ್ರತಿಭೆ, ಕಂಠಸಿರಿ ಹಾಗೂ ಹವ್ಯಾಸದ ಬೆಳವಣಿಗೆಗೆ ಸದವಕಾಶ ನೀಡಿದವು. ದೇವಳ ಕಾರ್ಯಾಲಯದಲ್ಲೆ ವೃತ್ತಿ ನಿರತರಾಗಿದ್ದ ಅವರು ಅವಕಾಶಗಳ ಸದುಪಯೋಗ ಪಡೆದು ಕಲಾವಿದರಾಗಿ ಬೆಳೆದರು. ಅಂದು ಧರ್ಮಸ್ಥಳದಲ್ಲಿದ್ದ ಹವ್ಯಾಸಿ ಯಕ್ಷಗಾನ ಕಲಾವಿದರ ಚಿಕ್ಕಮೇಳದಲ್ಲಿ ಮದ್ದಲೆವಾದಕರಾಗಿ ಅವರು ‘ರಂಗಪ್ರವೇಶ’ ಮಾಡಿದರು.
ಪ್ರೊ.ಮಧೂರು ಮೋಹನ ಕಲ್ಲೂರಾಯ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಅವರು ಗಮಕ ಕಲೆಯನ್ನೂ ಕರಗತ ಮಾಡಿಕೊಂಡರು. 2019ರಿಂದ 2023ರವರೆಗೆ ಬೆಳ್ತಂಗಡಿ ತಾಲ್ಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ, 2022ರಲ್ಲಿ ಪ್ರಥಮ ತಾಲ್ಲೂಕು ಗಮಕ ಸಮ್ಮೇಳನವನ್ನು ಅವರು ನಡೆಸಿದರು.
ಶಾಲೆಗಳಲ್ಲಿ ಗಮಕಕಲೆ ಪರಿಚಯ, ಮನೆಮನೆಯಲ್ಲಿ ಗಮಕ ಮೊದಲಾದ ವಿನೂತನ ಕಾರ್ಯಕ್ರಮಗಳ ಮೂಲಕ ಅವರು ಗಮಕಕಲೆಯನ್ನು ಜನಪ್ರಿಯಗೊಳಿಸಿದರು. ಪ್ರತಿವರ್ಷ ಧರ್ಮಸ್ಥಳದಲ್ಲಿ ಮಳೆಗಾಲದಲ್ಲಿ ಎರಡು ತಿಂಗಳು ನಡೆಯುವ ಗಮಕ ಶೈಲಿಯ ಪುರಾಣ ವಾಚನ-ಪ್ರವಚನ ಕಾರ್ಯಕ್ರಮದಲ್ಲಿ ಅವರು ಐವತ್ತು ವರ್ಷಗಳಿಂದ ಸಕ್ರಿಯರಾಗಿದ್ದಾರೆ.
ಭಾಗವತಿಕೆಯು ನಿರಂತರ ಅಭ್ಯಾಸದಿಂದ ಪಕ್ವವಾಗುತ್ತದೆ. ಶ್ರುತಿಗೆ ಸರಿಯಾಗಿ ಹಾಡಲು ಚೆನ್ನಾಗಿ ಅಭ್ಯಾಸ ಮಾಡಬೇಕಾಗುತ್ತದೆ. ಯಕ್ಷಗಾನದಿಂದ ದೂರವಾದ ಕಾರಣ ನನ್ನೊಳಗಿನ ಭಾಗವತ ನಿದ್ರಿಸಿದ್ದಾನೆ ಎಂದು ಜಯರಾಮ ಕುದ್ರೆತ್ತಾಯ ಅವರು ಹೇಳುತ್ತಾರೆ.