
ಲಕ್ಷ್ಮೇಶ್ವರ: ಒಡೆದ ಬಸ್ ಟೈರ್, ನಿರ್ವಾಹಕನಿಗೆ ತೀವ್ರ ಗಾಯ
ಲಕ್ಷ್ಮೇಶ್ವರ: ಸಾರಿಗೆ ಇಲಾಖೆಗೆ ಸೇರಿದ ಬಸ್‍ನ ಟೈರ್ ಒಡೆದ ಪರಿಣಾಮವಾಗಿ ನಿರ್ವಾಹಕ ಗುಡದಯ್ಯ ಗುಡ್ಡಯ್ಯ ಈಳಿಗೇರ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ.
ಲಕ್ಷ್ಮೇಶ್ವರ ಸಾರಿಗೆ ಘಟಕಕ್ಕೆ ಸೇರಿದ ಬಸ್ ಬೆಳ್ಳಟ್ಟಿಯಿಂದ ಶಿಗ್ಲಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಿರುವಾಗಿ ಈ ಅವಘಡ ನಡೆದಿದೆ. ಬಸ್ ಶಿಗ್ಲಿ ಸಮೀಪದ ಕನಕಾಪುರ ಹಳ್ಳದ ಹತ್ತಿರ ಬರುತ್ತಿದ್ದಂತೆ ಬಸ್‍ನ ಹಿಂದಿನ ಟೈರ್ ಭಾರಿ ಶಬ್ದದೊಂದಿಗೆ ಒಡೆಯಿತು. ಬಸ್ ನಿರ್ವಾಹಕ ಗುಡದಯ್ಯ ಅವರ ಕಾಲಿಗೆ ತಗಡು ಚುಚ್ಚಿ ತೀವ್ರ ಗಾಯ ಆಯಿತು. ತಕ್ಷಣ ಅವರನ್ನು ಲಕ್ಷ್ಮೇಶ್ವರದ ಸಮುದಾಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.
ಆಕ್ರೋಶ: ಅವಧಿಗೂ ಮೀರಿ ಚಲಿಸಿರುವ ಬಸ್‍ಗಳನ್ನೇ ದುರಸ್ತಿ ಮಾಡಿ ಓಡಿಸಲಾಗುತ್ತಿದೆ. ಕೆಲ ಬಸ್‍ಗಳ ಟೈರ್‌ಗಳಂತೂ ಚಲಿಸಲು ಬಾರದಷ್ಟು ಹಾಳಾಗಿವೆ. ಇಡೀ ಬಸ್ ತುಂಬ ಅಲ್ಲಲ್ಲಿ ತಗಡಿನಿಂದ ವೆಲ್ಡಿಂಗ್ ಮಾಡಲಾಗಿದ್ದು ನಾಲ್ಕೈದು ಪ್ರಯಾಣಿಕರು ಅಲ್ಲಿ ನಿಂತರೆ ಭಾರಕ್ಕೆ ಕೆಳಕ್ಕೆ ಬೀಳುವ ಭಯ ಇದೆ. ಎಲ್ಲ ಸೀಟುಗಳೂ ಹರಿದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ದೊಡ್ಡೂರು ಗ್ರಾಮದ ನಿವಾಸಿ ಮಲ್ಲೇಶ ಮಣ್ಣಮ್ಮನವರ, ‘ನಿಗದಿತ ಗುರಿಗಿಂತ ಹೆಚ್ಚು ಕಿ.ಮೀ ಓಡಿರುವ ಬಸ್‍ಗಳನ್ನು ಮತ್ತೆ ಓಡಿಸಬಾರದು’ ಎಂದು ಆಗ್ರಹಿಸಿದ್ದಾರೆ.