
ದೊಡ್ಡಬಳ್ಳಾಪುರ | ಘಾಟಿ ದೇಗುಲದ ಹುಂಡಿಯಲ್ಲಿ ₹77 ಲಕ್ಷ ಸಂಗ್ರಹ
ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಎಣಿಕೆಗೆ ಇದೇ ಪ್ರಥಮ ಬಾರಿಗೆ ದೇವಾಲಯಕ್ಕೆ ಆಗಮಿಸಿದ್ದ ಭಕ್ತರನ್ನು ಬಳಸಿಕೊಳ್ಳದೆ ತಹಶೀಲ್ದಾರ್ ಸಮ್ಮುಖದಲ್ಲಿ ದೇವಾಲಯ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಸಿಬ್ಬಂದಿ ಮಾತ್ರ ಎಣಿಕೆ ನಡೆಸಿದರು.
ಹುಂಡಿ ಎಣಿಕೆಯಲ್ಲಿ ನೋಟುಗಳ ರೂಪದಲ್ಲಿ ₹75,40,171, ನಾಣ್ಯಗಳ ರೂಪದಲ್ಲಿ ₹2,18,733 ಹಣ ಸಂಗ್ರಹವಾಗಿದೆ. ಇದರೊಂದಿಗೆ 660 ಗ್ರಾಂ ಬೆಳ್ಳಿ ಹಾಗೂ 3 ಗ್ರಾಂ 18 ಮಿಲಿಗ್ರಾಂ ಚಿನ್ನ ಸಂಗ್ರಹ ಆಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಭಕ್ತರ ಕಾಣಿಕೆ ಹಾಗೂ ದೇಣಿಗೆ ದುರ್ಬಳಕೆ ಆರೋಪಗಳ ಹಿನ್ನೆಲೆಯಲ್ಲಿ ಮುಂಜರಾಯಿ ಇಲಾಖೆಗೆ ಸೇರಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಸುತ್ತಮುತ್ತ ಹಲವಾರು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.
ಹುಂಡಿ ಎಣಿಕೆ ಕಾರ್ಯಕ್ಕೆ ಸಾರ್ವಜನಿಕರ ಸೇವೆ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದರ ಬದಲಾಗಿ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು.
ಹುಂಡಿಯಲ್ಲಿನ ಹಣ ಎಣಿಕೆ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗಳ, ದೇವಾಲಯದ ಕಾರ್ಯದರ್ಶಿ ಎಸ್.ಪಿ.ಮಹೇಶ್, ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ.ಜೆ.ಹೇಮಾವತಿ ಉಪಸ್ಥಿತರಿದ್ದರು.