
ಕಲಬುರಗಿ: 300 ಸ್ವಯಂ ಸೇವಕರಿಗೆ ವಿಪತ್ತು ರಕ್ಷಣಾ ಕಿಟ್ ವಿತರಣೆ
ಕಲಬುರಗಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೇಂದ್ರ ಪುರಸ್ಕೃತ ಆಪದ್ ಮಿತ್ರ ಯೋಜನೆಯಡಿ ವಿಪತ್ತಿನ ಸಂದರ್ಭದಲ್ಲಿ ತುರ್ತಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವ ಜಿಲ್ಲೆಯ 300 ಸ್ವಯಂ ಸೇವಕರಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬುಧವಾರ ರಕ್ಷಣಾ ಸಾಮಗ್ರಿ ಒಳಗೊಂಡ ಕಿಟ್ ವಿತರಿಸಿದರು.
ಪ್ರವಾಹ, ಚಂಡಮಾರುತ, ಭೂಕುಸಿತ ಹಾಗೂ ಭೂಕಂಪ ಸೇರಿದಂತೆ ವಿವಿಧ ವಿಪತ್ತುಗಳ ಸಂದರ್ಭದಲ್ಲಿ ಜನರ ರಕ್ಷಣೆಗೆ ತುರ್ತಾಗಿ ಧಾವಿಸಲು ಕಲಬುರಗಿ ಜಿಲ್ಲೆಯಿಂದ 300 ಸ್ವಯಂಸೇವಕರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಆಯ್ಕೆ ಮಾಡಿ ಅಗತ್ಯ ತರಬೇತಿ ಸಹ ನೀಡಲಾಗಿದೆ.
ವಿಪತ್ತು ಪರಿಸ್ಥಿತಿಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗುವಂತೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಆಯ್ದ ಸ್ವಯಂ ಸೇವಕರಿಗೆ ಡಿ.ಸಿ ಸಾಂಕೇತಿಕವಾಗಿ ವಿತರಿಸಿದರು.
ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿಶ್ವನಾಥ, ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್, ಸಿಬ್ಬಂದಿ ಮಲ್ಲಿಕಾರ್ಜುನ ಉದನೂರ, ಆನಂದ ಸಿರಗಾಪುರ, ಯುಸುಫ್ ರಾಜಾಪುರ ಇದ್ದರು.