
‘ಜೈಲರ್ 2’, ‘ಬೇಲ್’ ಸಿನಿಮಾಗಳ ಡಿಜಿಟಲ್ ಪೈರಸಿಗೆ ಮದ್ರಾಸ್ ಹೈಕೋರ್ಟ್ ತಡೆ
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಹಾಗೂ ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಸಿನಿಮಾಗಳ ಡಿಜಿಟಲ್ ಪೈರಸಿಯನ್ನು ತಡೆಗಟ್ಟಲು ಮದ್ರಾಸ್ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಕುರಿತು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆಯ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ವಿಚಾರಣೆ ವೇಳೆ ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್ ಪರ ವಕೀಲರಾದ ರಾಹುಲ್ ಬಾಲಾಜಿ ಅವರು ವಾದ ಮಂಡಿಸಿ, ‘ಇತ್ತೀಚಿನ ದಿನಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 30 ನಿಮಿಷಗಳಲ್ಲೇ ಪೈರಸಿ ವೆಬ್‌ಸೈಟ್‌ಗಳು ಹಾಗೂ ಟೆಲಿಗ್ರಾಂನಂತಹ ಡಿಜಿಟಲ್ ವೇದಿಕೆಗಳಲ್ಲಿ ಅಕ್ರಮವಾಗಿ ಅಪ್‌ಲೋಡ್ ಆಗುತ್ತಿವೆ. ಇದರಿಂದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ’ ಎಂದು ಹೇಳಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾ ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಡಿಜಿಟಲ್ ಪೈರಸಿಗೆ ತಡೆ ಕೋರಿ ಅಕ್ಟೋಬರ್ 8 ರಂದು ಕೆವಿಎನ್ ಪ್ರೊಡಕ್ಷನ್ಸ್ ನ್ಯಾಯಾಲಯದ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯವು ಯಾವುದೇ ಪೈರಸಿ ವೆಬ್‌ಸೈಟ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಟೆಲಿಗ್ರಾಂ ಚಾನೆಲ್‌ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ‘ಬೇಲ್’ ಅಥವಾ ‘ಜೈಲರ್ 2’ ಸಿನಿಮಾಗಳನ್ನು ಅನಧಿಕೃತವಾಗಿ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಇದರ ಜತೆಗೆ, ಇಂಟರ್ನೆಟ್ ಸೇವಾ ಸಂಸ್ಥೆಗಳಾದ ಬಿಎಸ್‌ಎನ್‌ಎಲ್, ಏರ್‌ಟೆಲ್, ಜಿಯೊ ಹಾಗೂ ಕೇಬಲ್ ಟಿವಿ ಆಪರೇಟರ್‌ಗಳು ಇಂತಹ ಅಕ್ರಮ ಲಿಂಕ್‌ಗಳನ್ನು ಪತ್ತೆಹಚ್ಚಿ ತಕ್ಷಣವೇ ಬ್ಲಾಕ್ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಈ ಎರಡೂ ಸಿನಿಮಾಗಳ ನಿರ್ಮಾಣ ಸಂಸ್ಥೆಗಳು ‘ಜಾನ್ ಡೋ’ ದಾವೆಯನ್ನು ಹೂಡಿದ್ದವು. ಪೈರಸಿ ಮಾಡುವ ಅಪರಿಚಿತ ಅಥವಾ ಅನಾಮಧೇಯ ವ್ಯಕ್ತಿಗಳ ವಿರುದ್ಧ ಮುನ್ನೆಚ್ಚರಿಕೆಯಾಗಿ ಹೂಡುವ ದಾವೆ ಇದಾಗಿದೆ. ಈ ಮೂಲಕ, ತಪ್ಪಿತಸ್ಥರ ಹೆಸರು ಮುಂಚಿತವಾಗಿ ತಿಳಿದಿಲ್ಲದಿದ್ದರೂ, ಲಿಂಕ್‌ಗಳು ಪತ್ತೆಯಾದ ತಕ್ಷಣವೇ ಕಾನೂನು ಕ್ರಮ ಜರುಗಿಸಲು ಮತ್ತು ಲಿಂಕ್‌ಗಳನ್ನು ಬ್ಲಾಕ್ ಮಾಡಲು ಈ ಆದೇಶ ನೆರವಾಗಲಿದೆ.
ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾ ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಪೈರಸಿ ತಡೆಯಲು ಚಿತ್ರತಂಡ ಸನ್ನದ್ಧವಾಗಿದೆ.