
ಗದಗ: ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾದ ಚೆನ್ನಮ್ಮ ಉದ್ಯಾನ
ಗದಗ: ‘ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದಲ್ಲಿರುವ ಐತಿಹಾಸಿಕ ಹಿನ್ನೆಲೆಯ ‘ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನ’ ನಿರ್ವಹಣೆಯಿಲ್ಲದೆ ಸಂಪೂರ್ಣ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಇದರ ನವೀಕರಣ ಹಾಗೂ ಸ್ವಚ್ಛತೆಗೆ ಮುಂದಾಗಬೇಕು’ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ ಆಗ್ರಹಿಸಿದರು.
ಉದ್ಯಾನವನದ ದುಃಸ್ಥಿತಿಯನ್ನು ಖಂಡಿಸಿ ಮಾತನಾಡಿದ ಅವರು, ‘ಸಾರ್ವಜನಿಕರ ಹಾಗೂ ಮಕ್ಕಳ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಉದ್ಯಾನದಲ್ಲಿ ಈಗ ಸ್ವಚ್ಛತೆಯೇ ಮಾಯವಾಗಿದೆ. ಉದ್ಯಾನದ ಸುತ್ತಮುತ್ತಲೂ ಕಸದ ರಾಶಿ ತುಂಬಿಕೊಂಡಿದ್ದು, ಅನೈರ್ಮಲ್ಯ ತಾಂಡವಾಡುತ್ತಿದೆ. ಮತ್ತೊಂದೆಡೆ, ಉದ್ಯಾನದ ಮುಂಭಾಗದಲ್ಲೇ ಸ್ಥಳೀಯರು ಬಟ್ಟೆಗಳನ್ನು ಒಣಗಿಸಲು ಹಾಕುತ್ತಿದ್ದು, ಸಾರ್ವಜನಿಕ ಆಸ್ತಿಯ ಸೌಂದರ್ಯಕ್ಕೆ ತೀವ್ರ ಧಕ್ಕೆಯುಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ರಸ್ತೆಯಲ್ಲಿ ಪ್ರತಿದಿನ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಚರಿಸುತ್ತಿದ್ದರೂ, ಕಣ್ಣೆದುರೇ ಹಾಳಾಗುತ್ತಿರುವ ಉದ್ಯಾನವನ್ನು ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿರುವುದು ವಿಷಾದನೀಯ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಉದ್ಯಾನವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಅನಗವಾಡಿ, ಶರಣಪ್ಪ ಗೋಳಗೋಳಕಿ ಇದ್ದರು.