ನವೆಂಬರ್ 20ಕ್ಕೆ ಧನುಷ್, ಮಮ್ಮುಟ್ಟಿ ನಟನೆಯ ‘ಓಂ: ಅಧ್ಯಾಯ–1’ ಬಿಡುಗಡೆ
ತಾರಾ ನಟರಾದ ಧನುಷ್ ಹಾಗೂ ಮಮ್ಮುಟ್ಟಿ ಅಭಿನಯದ ಬಹುನಿರೀಕ್ಷಿತ ‘ಓಂ: ಅಧ್ಯಾಯ-1’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಈ ಮೊದಲು ಅಕ್ಟೋಬರ್ 16ಕ್ಕೆ ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದಾಗಿ ಸ್ವತಃ ಧನುಷ್ ಅವರೇ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದರು.
ಇದೀಗ ಸಿನಿಮಾ ಬಿಡುಗಡೆಯ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, ‘ಓಂ: ಅಧ್ಯಾಯ–1’ ಸಿನಿಮಾ ನವೆಂಬರ್ 20ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ’ ಎಂದು ದೃಢಪಡಿಸಿದೆ. ಪೋಸ್ಟ್‌ನಲ್ಲಿ ಧನುಷ್ ಅವರೊಂದಿಗೆ ನಟ ಮಮ್ಮುಟ್ಟಿ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ದಿನಾಂಕ ಬದಲಿಸಲು ಕಾರಣವೇನು?
ಆರಂಭದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 16ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಅಕ್ಟೋಬರ್ 15ರಂದು ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಈ ಎರಡು ದೊಡ್ಡ ಸಿನಿಮಾಗಳ ನಡುವಿನ ಮುಖಾಮುಖಿಯನ್ನು ತಡೆಯಲು ಹಾಗೂ ವಾಣಿಜ್ಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಧನುಷ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಸ್ಪಷ್ಟಪಡಿಸಿದ್ದರು.
ಈ ಕುರಿತು ಬರೆದುಕೊಂಡಿದ್ದ ಅವರು, ‘ನಾವೆಲ್ಲರೂ ಹಲವು ವರ್ಷಗಳಿಂದ ಮೆಚ್ಚಿಕೊಂಡು ಗೌರವಿಸುತ್ತಿರುವ ರಜನಿಕಾಂತ್ ಸರ್ ನಟನೆಯ 'ಜೈಲರ್ 2' ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ, ಅವರ ಮೇಲಿರುವ ಅಪಾರ ಗೌರವದಿಂದಾಗಿ ನಮ್ಮ 'ಓಂ' ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದರು.
‘ನಮ್ಮ ಸಿನಿಮಾ ಈ ವರ್ಷದ ದೀಪಾವಳಿಯಲ್ಲಿಯೂ ಬಿಡುಗಡೆಗೊಳ್ಳುವುದಿಲ್ಲ. ಏಕೆಂದರೆ, ನಟ ಸೂರ್ಯ ಅವರು 'ಸೀನ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿದ್ದಾರೆ. ಅವರ ನಿರ್ಧಾರವನ್ನೂ ನಾವು ಗೌರವಿಸುತ್ತೇವೆ. ಚಿತ್ರತಂಡಗಳು ಪರಸ್ಪರ ತಿಳಿವಳಿಕೆಯಿಂದ ವರ್ತಿಸುತ್ತಾ, ಇತರರ ನಿರ್ಧಾರಗಳನ್ನು ಗೌರವಿಸಬೇಕು. ವಾಣಿಜ್ಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ಎಂದು ತಿಳಿಸಿದ್ದರು.
ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ 'ಓಂ: ಅಧ್ಯಾಯ-1' ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಧನುಷ್ ಜತೆಗೆ ಮಮ್ಮುಟ್ಟಿ, ಸಾಯಿ ಪಲ್ಲವಿ, ಶ್ರೀಲೀಲಾ ಹಾಗೂ ನಾಸಿರುದ್ದೀನ್ ಶಾ ನಟಿಸಿದ್ದಾರೆ.