
Web Exclusive | ಕನಸಾಗಿಯೇ ಉಳಿದ ಮುಳ್ಳಯ್ಯನಗಿರಿ ರೋಪ್ ವೇ ಯೋಜನೆ
ಚಿಕ್ಕಮಗಳೂರು: ರಾಜ್ಯದ ಅತೀ ಎತ್ತರದ ಶಿಖರ ಮುಳ್ಳಯ್ಯನಗಿರಿಗೆ ಹಲವೆಡೆ ರೋಪ್ ವೇ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ಸರ್ಕಾರದ ಮುಂದಿದೆ. ನಾಲ್ಕೈದು ವರ್ಷಗಳಿಂದ ಆಗೊಮ್ಮೆ ಈಗೊಮ್ಮೆ ಮುನ್ನೆಲೆಗೆ ಬರುತ್ತಿದೆಯೇ ಹೊರತು, ಯೋಜನೆ ಸಾಕಾರಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಕ್ಷಿ ನೋಟದಲ್ಲಿ ಗಿರಿ ದರ್ಶನ ಮಾಡುವ ಪ್ರವಾಸಿಗರ ಕನಸು ಹಾಗೇ ಉಳಿದಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ದೇವೀರಮ್ಮ ಬೆಟ್ಟಗಳ ಸಾಲುಗಳಿವೆ. ಶೋಲಾ ಅರಣ್ಯ ಈ ಗಿರಿಶ್ರೇಣಿಯ ವೈಶಿಷ್ಟ್ಯ. ಯಗಚಿ, ವೇದಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ. ಝರಿಗಳು, ಜಲಪಾತಗಳು, ಹಸಿರು ಕಾನನದ ತಾಣ. ಹುಲಿ, ಆನೆ, ಚಿರತೆ, ಜಿಂಕೆ ಸೇರಿ ವನ್ಯಜೀವಿ ಸಂಕುಲದ ಆವಾಸ ಸ್ಥಾನ. ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಣ.
ಈ ತಾಣಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಗಿರಿಶ್ರೇಣಿಗಳನ್ನು ವೀಕ್ಷಿಸಲು 2024ರಲ್ಲಿ 12.55 ಲಕ್ಷ ಪ್ರವಾಸಿಗರು ಬಂದಿದ್ದರೆ, 2025ರಲ್ಲಿ 26.26 ಲಕ್ಷ ಜನ ಬಂದು ಹೋಗಿದ್ದಾರೆ. 2026ರಲ್ಲಿ ಆಗಸ್ಟ್ ಅಂತ್ಯದವರೆಗೆ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ಈ ತಾಣವನ್ನು ಇನ್ನಷ್ಟು ರಮಣೀಯವಾಗಿ ಪ್ರವಾಸಿಗರಿಗೆ ಪರಿಚಯಿಸುವುದು ಪ್ರವಾಸೋದ್ಯಮ ಇಲಾಖೆಯ ಉದ್ದೇಶ. ರೋಪ್‌ವೇ ನಿರ್ಮಿಸುವ ಯೋಜನೆ ರೂಪಿಸಿದ್ದು, 2023ರಲ್ಲಿ ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದ ತಜ್ಞರ ತಂಡ ಐದು ಸ್ಥಳಗಳನ್ನೂ ಗುರುತಿಸಿತು. ಮುಳ್ಳಯ್ಯನಗಿರಿ, ಕವಿಕಲ್ ಗಂಡಿ, ದತ್ತಪೀಠ ಟವರ್ ಪಾಯಿಂಟ್, ಮಾಣಿಕ್ಯಧಾರ ಜಲಪಾತ, ಮುಳ್ಳಯ್ಯನಗಿರಿ ತಿರುವ ರಸ್ತೆಯ ಜಂಕ್ಷನ್ ಸೇರಿ ಐದು ಕಡೆ ಸ್ಥಳ ಪರಿಶೀಲನೆ ನಡೆಸಿತ್ತು.
ಪ್ರತಿವರ್ಷ ಬಜೆಟ್‌ನಲ್ಲಿ ಈ ಯೋಜನೆ ಪ್ರಸ್ತಾಪವಾಗುತ್ತಿದೆಯೇ ಹೊರತು ಭೌತಿಕವಾಗಿ ಪ್ರಗತಿ ಕಂಡಿಲ್ಲ. 2026ರ ಬಜೆಟ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿ ಸೀತಾಳಯ್ಯನಗಿರಿಯಿಂದ ಕೈಮರ ತನಕ ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಹೇಳಿದೆ.
ಈ ವರ್ಷ ಒಂದು ಹೆಜ್ಜೆಯನ್ನಷ್ಟೇ ಪ್ರವಾಸೋದ್ಯಮ ಇಲಾಖೆ ಮುಂದಿಟ್ಟಿದ್ದು, ಟ್ರ್ಯಾಂಜಾಕ್ಷನ್ ಅಡ್ವೈಸರ್(ವಹಿವಾಟು ಸಲಹೆಗಾರ) ಸಂಸ್ಥೆ ನೇಮಿಸಲು ಸಿದ್ಧತೆ ನಡೆಸಿದೆ. ತಜ್ಞ ಸಂಸ್ಥೆಯು ರೋಪ್‌ವೇ ಯೋಜನೆಯನ್ನು ಸರ್ಕಾರ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು, ಹಣಕಾಸು ವ್ಯವಸ್ಥೆ ಹೇಗೆ ಮಾಡಬೇಕು, ಖಾಸಗಿ ಸಂಸ್ಥೆಯನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದರ ಕುರಿತು ಸಲಹೆ ನೀಡಲಿದೆ.
ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಲಿದ್ದು, ರೋಪ್‌ವೇ ನಿರ್ಮಾಣ ಸಾಧ್ಯವೇ, ಎಷ್ಟು ಪ್ರಯಾಣಿಕರು ಬಳಸಬಹುದು,ಯೋಜನೆಯ ಅಂದಾಜು ವೆಚ್ಚ ಎಷ್ಟು, ಆದಾಯ ಎಷ್ಟು ಬರಬಹುದು ಎಂಬುದನ್ನು ಅಧ್ಯಯನ ಮಾಡಲಿದೆ. ಯೋಜನೆಗೆ ಬೇಕಾದ ಬಂಡವಾಳ, ನಿರ್ವಹಣಾ ವೆಚ್ಚ, ಟಿಕೆಟ್ ದರ, ನಿರೀಕ್ಷಿತ ಆದಾಯ, ಲಾಭ–ನಷ್ಟದ ಸೇರಿ ಎಲ್ಲವನ್ನೂ ಅಂದಾಜುಪಡಿಸಲಿದೆ.
ಮುಳ್ಳಯ್ಯನಗಿರಿಯ ಕೆಳಭಾಗದಲ್ಲಿ ಲೋಯರ್ ಟ್ರ್ಯಾಂಜಕ್ಷನ್ ಪಾಯಿಂಟ್(ಎಲ್‌ಟಿಪಿ) ಆದರೆ, ಸೀತಾಳಯ್ಯನಗಿರಿ ಅಪ್ಪರ್ ಟ್ರ್ಯಾಂಜಕ್ಷನ್ ಪಾಯಿಂಟ್(ಎಲ್‌ಟಿಪಿ) ಆಗಲಿದೆ. ಎಲ್‌ಟಿಪಿಗೆ ಕೆಳಭಾಗದಲ್ಲಿ ಜಾಗ ಬೇಕಾಗಲಿದೆ. ಈ ಜಾಗವೇ ಸಿಗದ ಕಾರಣ ಟ್ರ್ಯಾಂಜಾಕ್ಷನ್ ಅಡ್ವೈಸರ್(ವಹಿವಾಟು ಸಲಹೆಗಾರ) ಸಂಸ್ಥೆ ನೇಮಕ ವಿಳಂಬವಾಗುತ್ತಿದೆ. ಸೂಕ್ತ ಜಾಗಕ್ಕೆ ಜಿಲ್ಲಾಡಳಿತ ಹುಡುಕಾಟ ನಡೆಸುತ್ತಲೇ, ಒಂದಿಲ್ಲೊಂದು ವಿವಾದದ ನಡುವೆ ಯೋಜನೆ ನನೆಗುದಿಗೆ ಬೀಳುತ್ತಿದೆ.
ಪರಿಸರವಾದಿಗಳ ವಿರೋಧ: ಈ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧವಿದೆ. ಅನುಷ್ಠಾನಕ್ಕೆ ಮುಂದಾದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಮುದ್ರ ಮಟ್ಟದಿಂದ 6,813 ಅಡಿ ಎತ್ತರದಲ್ಲಿ ಮುಳ್ಳಯ್ಯನಗಿರಿ ಇದೆ. ಪಶ್ಚಿಮಘಟ್ಟದ ನೀಲಗಿರಿ ಬೆಟ್ಟ ಶ್ರೇಣಿಯನ್ನು ಬಿಟ್ಟರೆ, ಈ ಗಿರಿಶ್ರೇಣಿಯಲ್ಲೇ ಅತೀ ಎತ್ತರದ ಶಿಖರ ಇದು. ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲೂ ಒಂದಾಗಿರುವ ಇಲ್ಲಿ ಪರಿಸರ ವಿರೋಧಿ ಕಾಮಗಾರಿ ಕೈಗೊಳ್ಳುವುದು ಅಪಾಯಕರ ಎಂಬುದು ವೈಲ್ಡ್ ಕ್ಯಾಟ್ –ಸಿ ಸಂಸ್ಥೆ ಆಕ್ಷೇಪ.
ಅತೀ ಹೆಚ್ಚು ಮುಂಗಾರು ಮಳೆ ಸುರಿಯುವ ಈ ಬೆಟ್ಟ ಪ್ರದೇಶವನ್ನು ಕೆತ್ತಿ ಘಾಸಿಗೊಳಿಸಿದರೆ ಮುಂದಾಗುವ ಅಪಾಯ ಹಾಗೂ ಪರಿಸರ ಹಾನಿ ಬಗ್ಗೆ ಸರ್ಕಾರ ಯೋಚಿಸಬೇಕು. ರೋಪ್ ವೇ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದೆ.
ಈ ಹಿಂದೆ ಹೆಲಿಟೂರಿಸಂ ಯೋಜನೆಗೂ ವೈಲ್ಡ್ ಕ್ಯಾಟ್–ಸಿ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು. ವರ್ಷಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ಮೂಲಕ ಪರಿಸರ ದರ್ಶನ ಮಾಡಿಸಲು ಜಿಲ್ಲಾಡಳಿತ ಯೋಚಿಸಿತ್ತು. ಆದರೆ, ಹಸಿರು ನ್ಯಾಯಪೀಠದ (ಎನ್‌ಜಿಟಿ) ತಡೆ ನೀಡಿದ್ದರಿಂದ ಯೋಜನೆಯನ್ನು ಜಿಲ್ಲಾಡಳಿತ ಕೈಬಿಟ್ಟಿತ್ತು.
ಇದೆಲ್ಲದರ ನಡುವೆ ರೋಪ್‌ವೇ ಯೋಜನೆಗೆ ಪರಿಸರ ಅನುಮತಿ ದೊರಕುವುದೇ ಎಂಬ ಅನುಮಾನ ಕೂಡ ಇದೆ. ಆದರೆ, ‘ಗಿರಿಯ ಕೆಳಭಾಗದ ಹಿಡುವಳಿ ಪ್ರದೇಶಗಳ ನಡುವಿನ ಜಾಗ ಆರಂಭಿಕ ಸ್ಥಾನವಾದರೆ, ಮಧ್ಯದಲ್ಲಿ ಅಲ್ಲಲ್ಲಿ ಪಿಲ್ಲರ್‌ಗಳು ಬರಲಿವೆ. ಅದಕ್ಕೆ ಗುಂಟೆ ಲೆಕ್ಕದಲ್ಲಿ ಜಾಗ ಸಾಕು. ಇನ್ನು ಮೇಲ್ಭಾಗದ ಸೀತಾಳಯ್ಯನಗಿರಿ ಬಳಿ ಜಾಗವಿದೆ. ಆದ್ದರಿಂದ ಪರಿಸರಕ್ಕೆ ಯಾವುದೆ ಹಾನಿಯಾಗುವುದಿಲ್ಲ’ ಎಂಬುದು ಅಧಿಕಾರಿಗಳ ಅಭಿಪ್ರಾಯ.