ಚಿಕ್ಕಬಳ್ಳಾಪುರ: ‘ಇ–ಖಾತೆ’ ಸುತ್ತ ರಾಜಕೀಯ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ

ಚಿಕ್ಕಬಳ್ಳಾಪುರ: ‘ಇ–ಖಾತೆ’ ಸುತ್ತ ರಾಜಕೀಯ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ

ಚಿಕ್ಕಬಳ್ಳಾಪುರ: ‘ಇ–ಖಾತೆ’ ಸುತ್ತ ರಾಜಕೀಯ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿನ 97,130.30 ಚದುರ ಮೀಟರ್ ಸರ್ಕಾರಿ (ಸುಮಾರು 24 ಎಕರೆ) ಜಾಗಕ್ಕೆ ನಗರಸಭೆಯು ಖಾಸಗಿ ಅವರಿಗೆ ಇ–ಖಾತೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರಸಭೆಯ ನಾಲ್ಕು ಮಂದಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ಈ ನಡುವೆಯೇ ಪ್ರಕರಣದ ವಿಚಾರವಾಗಿ ರಾಜಕೀಯ ಚರ್ಚೆಗಳೂ ಜೋರಾಗಿವೆ. ಲಾಗಿನ್, ಬೆರಳಚ್ಚು, ಖಾತೆ ಸೃಜನೆಯ ವಿಚಾರಗಳಲ್ಲಿ ಅಧಿಕಾರಿಗಳ ನಿರ್ಧಾರವೇ ಅಂತಿಮ. ಹೀಗಿದ್ದರೂ ‘ಇ–ಖಾತೆ’ ವಿಚಾರದಲ್ಲಿ ರಾಜಕೀಯ ನಾಯಕರು ಸಹ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆಯೇ, ಪ್ರಭಾವಿಗಳು, ನಗರಸಭೆ ಮಾಜಿ ಸದಸ್ಯರು ಈ ಜಾಲದಲ್ಲಿ ಇದ್ದಾರೆಯೇ ಎನ್ನುವ ಚರ್ಚೆಗಳು ಜೋರಾಗಿವೆ. ಅವರ ಕೈವಾಡ ಇದೆಯಂತೆ, ಇವರು ಸಹಕಾರ ನೀಡಿದ್ದಾರಂತೆ ಎನ್ನುವ ಮಾತು ಚಿಕ್ಕಬಳ್ಳಾಪುರದಲ್ಲಿದೆ.

ಇದಕ್ಕೆ ಪುಷ್ಠಿ ಎನ್ನುವಂತೆ ಮೂರು ವರ್ಷಗಳ ಹಿಂದೆ ಇದೇ ಜಾಗಕ್ಕೆ ‘ಇ–ಖಾತೆ’ ಮಾಡಿಕೊಡುವಂತೆ ನಗರಸಭೆಯ ಅಂದಿನ ಅಧ್ಯಕ್ಷರಿಗೆ ದೊಡ್ಡ ಮೊತ್ತದ ‘ಇಡುಗಂಟು’ ನೀಡಲು ಕೆಲವರು ಮುಂದಾಗಿದ್ದರು. ಆದರೆ ಆ ಆಮಿಷವನ್ನು ಅವರು ತಿರಸ್ಕರಿಸಿದ್ದರು ಎನ್ನುತ್ತವೆ ಮೂಲಗಳು. ‘ಖಾತೆ ವಿಚಾರವಾಗಿ ತಮಗೆ ಆಮಿಷವೊಡ್ಡಿದ್ದನ್ನು ನಗರಸಭೆ ಮಾಜಿ ಅಧ್ಯಕ್ಷರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಕೋಟ್ಯಂತರ ರೂಪಾಯಿ ಮೊತ್ತದ 24 ಎಕರೆ ಜಮೀನಿಗೆ ಇ–ಖಾತೆ ನೀಡಲಾಗಿದೆ. ಜಿಲ್ಲಾಡಳಿತ ಮತ್ತು ತನಿಖಾ ತಂಡವೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ–ಖಾತೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಈ ದೊಡ್ಡ ಪ್ರಮಾಣದ ಅಕ್ರಮದಲ್ಲಿ ಜಾಲಗಳೂ ದೊಡ್ಡದಾಗಿರುವ ಅನುಮಾನಗಳು ಸಹ ಮೂಡಿವೆ.

ಪ್ರಕರಣ ಬಯಲಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನು ತಿರುಚಿ (ಎಡಿಟ್) ಅವುಗಳಿಗೆ ರಾಜಕೀಯ ನಾಯಕರ ಚಿತ್ರ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿದ್ದರು. ಪ್ರಕರಣದ ಬಗ್ಗೆ ವರದಿ ಆಗುತ್ತಿದ್ದಂತೆಯೇ ನಗರಸಭೆ ಅಂಗಳಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೂ ದಾಂಗುಡಿ ಇಟ್ಟಿದ್ದರು. ಎರಡೂ ಪಕ್ಷದ ಸ್ಥಳೀಯ ಮುಖಂಡರ ನಡುವೆ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಹೀಗೆ ಪ್ರಕರಣದ ಸಮಗ್ರ ವರದಿ ಹೊರ ಬೀಳುವ ಮುನ್ನವೇ ರಾಜಕೀಯವಾಗಿಯೂ ‘ಇ–ಖಾತೆ’ ಪ್ರಕರಣ ಚರ್ಚೆಗೆ ಒಳಗಾಗಿದೆ.

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಕರವಸೂಲಿಗಾರ ಟಿ.ಎನ್.ವೆಂಕಟೇಶ್, ಕಂದಾಯ ನಿರೀಕ್ಷಕ ವಿ.ಆರ್.ವೆಂಕಟೇಶ್, ಕಂದಾಯ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿರುವ ನಟರಾಜ್, ನಗರಸಭೆ ವ್ಯಾಪ್ತಿಯಲ್ಲಿ ಇಲ್ಲದ ಕಂದಾಯ ಇಲಾಖೆಯ ಸರ್ಕಾರಿ ಸರ್ವೆ ನಂಬರ್ ಆಸ್ತಿಗೆ ಇ–ಸ್ವತ್ತು ನೀಡಲು ಸಹಕರಿಸಿದ್ದು ಕಂಡು ಬಂದಿದೆ. ಇವರ ವಿರುದ್ಧ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಲು ಪ್ರಯತ್ನಿಸಿರುವವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ತನಿಖಾ ತಂಡ ಕೆಲ ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲಿದೆ. ಈ ವೇಳೆ ಪೌರಾಯುಕ್ತರು, ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿ, ಕರವಸೂಲಿಗಾರರ ಹೇಳಿಕೆಗಳು ವರದಿಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿ ಅಂತಿಮ ವರದಿಯತ್ತ ನೆಟ್ಟಿದೆ.

‘ಯಾರ ಪಾತ್ರವೇನು; ತನಿಖೆಯಾಗಲಿ’

ಸರ್ಕಾರಿ ಖಾಗವನ್ನು ಖಾಸಗಿಯವರಿಗೆ ಇ–ಖಾತೆ ಮಾಡಿರುವ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಅವರ ಶಿಫಾರಸು ಮಾಡಿದ್ದಾರೆ. ಇದು ಒಳ್ಳೆಯ ನಡೆ. ಜೊತೆಗೆ ಈ ಪ್ರಕರಣದಲ್ಲಿ ಯಾರ ಯಾರ ಪಾತ್ರವಿದೆ. ರಾಜಕಾರಣಿಗಳು ಶಾಮೀಲಾಗಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ಆಗಬೇಕು ಎಂದು ನಗರಸಭೆ ಮಾಜಿ ಸದಸ್ಯ ಸತೀಶ್ ಆಗ್ರಹಿಸುವರು.

ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಜಾಲವಿದೆಯೇ ಎನ್ನುವ ಅನುಮಾನವೂ ನಾಗರಿಕರಲ್ಲಿ ಇದೆ. ಅಧಿಕಾರಿಗಳ ಬೆನ್ನ ಹಿಂದೆ ಯಾರಾದರೂ ಇದ್ದಾರೆಯೇ, ಆಮಿಷವೊಡ್ಡಿ ಕೆಲಸ ಮಾಡಿಸಿಕೊಂಡರೇ...ಈ ಎಲ್ಲ ವಿಚಾರಗಳು ಬಯಲಿಗೆ ಬರಬೇಕಿದೆ ಎಂದರು.

ಹೆಸರು ನಮೂದಿಸದಿರುವುದಕ್ಕೆ ಬೇಸರ

‍‍ಪ್ರಕರಣದ ಮಧ್ಯಂತರ ತನಿಖಾ ವರದಿಯಲ್ಲಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುವ ಜಿಲ್ಲಾಧಿಕಾರಿ ಅವರ ವರದಿಯಲ್ಲಿ ತಮ್ಮ ಹೆಸರು ನಮೂದಿಸದಿರುವುದಕ್ಕೆ ದೂರುದಾರರಾದ ನಗರಸಭೆ ಮಾಜಿ ಸದಸ್ಯ ಮಹಮದ್ ಸಾದಿಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿ ಸರ್ಕಾರಿ ಆಸ್ತಿಗಳನ್ನು ಉಳಿಸಲು ಈ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದೇನೆ. ಲೋಕಾಯುಕ್ತ ಕಚೇರಿ, ನ್ಯಾಯಾಲಯ ಮೆಟ್ಟಿಲು ಹತ್ತಿದ್ದೇನೆ. ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿನ 97,130.30 ಚದುರ ಮೀಟರ್ ಜಾಗಕ್ಕೆ ಸಂಬಂಧಿಸಿದಂತೆ ಕಠಿಣ ಪರಿಸ್ಥಿತಿಯ ನಡುವೆಯೂ ದಾಖಲೆಗಳನ್ನು ಸಂಗ್ರಹಿಸಿ ದೂರು ನೀಡಿದ್ದೆ. ಆದರೆ ತನಿಖಾ ವರದಿಯಲ್ಲಿ ‘ಇಂತಹವರು ದೂರು ನೀಡಿದ್ದರು’ ಎಂದು ನನ್ನ ಹೆಸರನ್ನು ಉಲ್ಲೇಖಿಸಿಯೇ ಇಲ್ಲ. ಇದು ಬೇಸರ ತರಿಸಿದೆ ಎಂದು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ