ಚಿಕ್ಕಮಗಳೂರು ಮಾರುಕಟ್ಟೆಗೆ ಬಂದ ಪರಿಸರಸ್ನೇಹಿ ಗಣಪ ಮೂರ್ತಿಗಳು

ಚಿಕ್ಕಮಗಳೂರು ಮಾರುಕಟ್ಟೆಗೆ ಬಂದ ಪರಿಸರಸ್ನೇಹಿ ಗಣಪ ಮೂರ್ತಿಗಳು

ಚಿಕ್ಕಮಗಳೂರು ಮಾರುಕಟ್ಟೆಗೆ ಬಂದ ಪರಿಸರಸ್ನೇಹಿ ಗಣಪ ಮೂರ್ತಿಗಳು

ಚಿಕ್ಕಮಗಳೂರು: ಗಣೇಶ ಚತುರ್ಥಿಗೆ ತರಹೇವಾರಿ ಗಣೇಶನ ಮೂರ್ತಿಗಳು ಸಿದ್ಧವಾಗುತ್ತಿವೆ. ಇದೇ ಮೊದಲ ಬಾರಿಗೆ ಸ್ವಸಹಾಯ ಸಂಘದ ಸದಸ್ಯೆಯರು ಸಾವಯವ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಮಾರುಕಟ್ಟೆಗೆ ಬಂದಿವೆ.

ತಾಲ್ಲೂಕಿನ ಕಳಸಾಪುರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ನಂಜುಂಡೇಶ್ವರ ಸ್ವಸಹಾಯ ಸಂಘದ ವತಿಯಿಂದ ಗಣಪತಿಯ 400ಕ್ಕೂ ಹೆಚ್ಚು ವಿಗ್ರಹಗಳನ್ನು ತಯಾರಿಸಲಾಗಿದೆ.

ಗಣೇಶ ಚತುರ್ಥಿಯಂದು ಕಚೇರಿ, ಮನೆ, ಬ್ಯಾಂಕ್, ಸಂಘ–ಸಂಸ್ಥೆಗಳಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಆಗಲಿವೆ. ಈ ಸಂಭ್ರಮದ ನೆಪದಲ್ಲಿ ಪರಿಸರ ಕಾಳಜಿ ಮರೆಯಲಾಗುತ್ತಿದೆ. ಪರಿಸರಕ್ಕೆ ಮಾಲಿನ್ಯ ತಪ್ಪಿಸುವ ಜತೆಗೆ ಪರಿಸರ ಉಳಿಸುವ ಪ್ರಯತ್ನವನ್ನು ಈ ಸ್ವಸಹಾಯ ಸಂಘ ಮಾಡುತ್ತಿದೆ.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಅವರ ಮಾರ್ಗದರ್ಶನದಂತೆ ಗಣೇಶ ಮೂರ್ತಿ ತಯಾರಿಕೆಗೆ ಜೇಡಿಮಣ್ಣು, ಸಗಣಿ, ಅರಿಶಿನ, ಸಾಂಬ್ರಾಣಿ, ನೈಸರ್ಗಿಕ ಮೂಲಿಕೆಗಳು ಹಾಗೂ ಸಸ್ಯದ ಬೀಜಗಳನ್ನು ಬಳಕೆ ಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಸಂಜೀವಿನಿ ಒಕ್ಕೂಟದ ಬೆಂಬಲ ಮತ್ತು ತರಬೇತಿ ಪಡೆದು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಸಂಘದ ಸದಸ್ಯೆ ಅನ್ನಪೂರ್ಣ ಹೇಳುತ್ತಾರೆ.

ಪೂಜೆ ಸಲ್ಲಿಸಿ ತಮಗೆ ಇಷ್ಟ ಇರುವಷ್ಟು ದಿನ ಪ್ರತಿಷ್ಠಾಪನೆ ಮಾಡಬಹುದು. ನೀರಿನಲ್ಲಿ ಮುಳುಗಿಸಲು ಎಲ್ಲಿಯೂ ಹೋಗಬೇಕಾದ ಅನಿವಾರ್ಯತೆ ಇಲ್ಲ. ಮನೆಯ ಬಕೆಟ್‌ನಲ್ಲಿ ಮುಳುಗಿಸಿದರೆ ಮೂರ್ತಿ ಸಂಪೂರ್ಣ ಕರಗಿ ಹೋಗುತ್ತದೆ. ಸಾವಯವ ಗೊಬ್ಬರದ ಅಂಶ ಇರುವ ಆ ನೀರನ್ನು ಹೂವಿನ ಕುಂಡಗಳಿಗೆ ಹಾಕಿದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆ ಗಿಡಗಳಲ್ಲಿ ಅರಳಿದ ಹೂವುಗಳು ಗಣಪತಿ ಮೂರ್ತಿಯ ಅಂಶದಿಂದ ಬಂದಿವೆ ಎಂಬ ಭಾವನೆಯೂ ಭಕ್ತರಲ್ಲಿ ಬರಲಿದೆ ಎಂದು ಅವರು ವಿವರಿಸುತ್ತಾರೆ.

‘ಸಗಣಿಯನ್ನು ಗ್ರಾಮೀಣ ಪರಂಪರೆಯಲ್ಲಿ ಬಹು ಕಾಲದಿಂದ ವಿವಿಧ ರೀತಿಯಲ್ಲಿ ಬಳಸುತ್ತಿರುವ ನೈಸರ್ಗಿಕ ವಸ್ತು. ಗಣಪತಿ ವಿಗ್ರಹ ತಯಾರಿಕೆಯಲ್ಲಿ ಇದನ್ನು ಬಳಕೆ ಮಾಡಿರುವುದು ಸ್ಥಳೀಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಸಾರುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸುಜಾತಾ ತಿಳಿಸಿದರು.

ಸಾವಯವ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳಲ್ಲಿ ಸೊಪ್ಪಿನ ಗಿಡಗಳ ಬೀಜಗಳನ್ನು ಹಾಕಲಾಗಿದೆ. ಮನೆಯಲ್ಲೇ ಗಿಡಗಳ ಬುಡಗಳಲ್ಲಿ ಸೂಕ್ತ ರೀತಿಯಲ್ಲಿ ವಿಸರ್ಜಿಸಿ ನಂತರ ಮಣ್ಣಿನಲ್ಲಿ ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ ಎಂದು ಅವರು ವಿವರಿಸಿದರು.

ರೈತರಿಗೆ ಬಹಳಷ್ಟು ಉಪಯೋಗ

ಸಾವಯವ ಪರಿಸರ ಸ್ನೇಹಿ ಗಣಪತಿಯಿಂದ ರೈತರಿಗೆ ಬಹಳಷ್ಟು ಉಪಯೋಗವಾಗಲಿದೆ ಎಂದು ನಂಜುಂಡೇಶ್ವರ ಸ್ವಸಹಾಯ ಸಂಘದ ಸದಸ್ಯೆ ಅನ್ನಪೂರ್ಣ ಹೇಳಿದರು.

‘ಪೂಜೆ ನಂತರ ಮೂರ್ತಿಯ ವಿಸರ್ಜನೆ ಅತ್ಯಂತ ಸುಲಭ. ಮೂರ್ತಿ ಕರಗಿದ ನಂತರ ಗಿಡಗಳ ಕುಂಡಕ್ಕೆ ಹಾಕುವುದಿಂದ ಗೊಬ್ಬರವಾಗಿ ಉಪಯೋಗವಾಗುತ್ತದೆ. ಸಂಪ್ರದಾಯದ ಪ್ರಕಾರ ಎಲ್ಲಾ ಪೂಜೆಗಳಿಗೂ ಮೊದಲು ಸಗಣಿಯನ್ನು ಗಣೇಶನ ರೂಪವಾಗಿ ಪೂಜಿಸಲಾಗುತ್ತದೆ. ಅದನ್ನೇ ಮೂಲವಾಗಿ ಇಟ್ಟುಕೊಂಡು ಸಗಣಿ ಬಳಕೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ಕಡಿಮೆ ದರ, ಪರಿಸರ ಪೂರಕ’

‘ಅತ್ಯಂತ ಕಡಿಮೆ ದರದಲ್ಲಿ ಸಾವಯವ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಈ ಸಾವಯವ ಗಣಪತಿ ಮೂರ್ತಿಗಳು ಜನರಿಗೆ ಲಭ್ಯವಾಗಲಿವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಎಸ್.ಕೀರ್ತನಾ ತಿಳಿಸಿದರು.

‘ಪರಿಸರಕ್ಕೆ ಅತ್ಯಂತ ಪೂರಕವಾದ ವಸ್ತುಗಳನ್ನು ಬಳಸಲಾಗಿದೆ. ಈ ಮೂರ್ತಿಗಳಿಗೆ ₹ 350 ದರ ನಿಗದಿ ಮಾಡಲಾಗಿದೆ. ಆದ್ದರಿಂದ ಜನರಿಗೆ ಖರೀದಿಯೂ ಸುಲಭ, ಪರಿಸರ ಕಾಪಾಡಿದ ನೆಮ್ಮದಿಯೂ ದೊರಕಲಿದೆ. ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಈ ಮೂರ್ತಿಗಳನ್ನು ಮಾರಾಟ ಮಾಡಲಾಗುವುದು’ ಎಂದು ‘‍ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ