
PV Web Exclusive: ಭೀಷ್ಮ ಕೆರೆಯ ಒಡಲಾಳ... ಮನದಾಳ...
ಅದೊಂದು ಕಾಲವಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಹಸಿರು. ನಡುವೆ ನಾನು. ಸ್ವಚ್ಛಂದ ಪರಿಸರ, ಸಕಲವೂ ನನ್ನ ಬಳಿಯಿದ್ದ ಸಂತೃಪ್ತಿ. ಚಿಂವ್ಗುಡುತ್ತಿದ್ದ ಹಕ್ಕಿಗಳ ಹಾರಾಟ, ಒಡಲೊಳಗೆ ಮೀನುಗಳ ತುಂಟಾಟ. ಸೂರ್ಯನ ಝಳಪಿಗೆ ಫಳ ಫಳ ಎನ್ನುತ್ತಿದ್ದ ನನ್ನ ಹೆಸರು ‘ಭೀಷ್ಮ’.
ಭೀಷ್ಮ ಪಿತಾಮಹನಂತೆಯೇ ಈ ಗದಗ ನಗರಕ್ಕೆ ನಾನು ಹೆಗ್ಗುರುತು. ಊರಿನಲ್ಲಿ ಸಾಗವವರೆಲ್ಲ ನನ್ನತ್ತ ನೋಡಲೇಬೇಕು. ಅಷ್ಟು ವಿಶಾಲ. ಊರೊಳಗಿನ ಸೌಂದರ್ಯ, ಸಮೃದ್ಧತೆಗೆ ನಾನು ಕಾರಣವಲ್ಲದೆ ಮತ್ತೇನು? ಗದಗಕ್ಕೆ ನಾನು ಜಲ ಮಾತ್ರವಲ್ಲ ಜೀವಾಳ…
ನೂರಾರು ಎಕೆರೆಯಲ್ಲಿ ಚಾಚಿಕೊಂಡರುವ ನನ್ನ ಚೆಲುವನ್ನು ಕುಮಾರವ್ಯಾಸನಾದಿಯಾಗಿ ಕವಿವರೇಣ್ಯರು, ದಿಗ್ಗಜರು ಕಣ್ತುಂಬಿಕೊಂಡಿದ್ದಾರೆ. ಎಷ್ಟೋ ಕವಿತೆಗೆ, ಬರಹಕ್ಕೆ ನಾನೂ ಸ್ಪೂರ್ತಿ. ಗದುಗಿನ ಜನರು, ಇಲ್ಲಿಗೆ ಬಂದವರು, ಹೀಗೆ ಸಾಗುವವರು ನನ್ನ ಪದೇ ಪದೇ ಕಾಣಲು ಇಚ್ಛಿಸುತ್ತಿದ್ದರು. ಕೆಲ ಸಮಯವಾದರೂ ನನ್ನೊಂದಿಗೆ ಮಾತನಾಡಲು ಬಯಸುತ್ತಿದ್ದರು.
ಈಗ ಆ ಕಾಲ ಇಲ್ಲ ಬಿಡಿ. ಎಲ್ಲವೂ ಬದಲಾಗಿದೆ. ನಾನೀಗ ಜೀವಾಳವಲ್ಲ. ನೊಂದ ಜೀವಾತ್ಮ. ನನ್ನ ಕಥೆ ಯಾರಿಗೂ ಬೇಡದಾಗಿದೆ. ಇತ್ತೀಚೆಗಂತೂ ಅಸ್ತಿತ್ವವನ್ನೇ ಕಳೆದುಕೊಂಡು ಅಸ್ತಿಪಂಜರದಂತಾಗಿರುವೆ. ಇಲ್ಲೇ, ನೂರಾರು ಅಡಿ ಎತ್ತರದ ಅಣ್ಣ; ಬಸವಣ್ಣ ಇದ್ದಾರೆ. ನನ್ನ ಆರ್ಥನಾದವನ್ನು ವಚನಾಗಿಸು, ಅರಿವುಗೆಟ್ಟ ಜನರಿಗೆ ಅರಿವು ಮೂಡಿಸು ಎಂದು ಬಾರಿ ಬಾರಿ ಬೇಡಿಕೊಂಡಿರುವೆ. ಅದೇಕೋ, ಬಸವಣ್ಣನೂ ಮೌನ…
ಏನಾನಾಯಿತು ಗೊತ್ತಾ... ನೈಸರ್ಗಿಕವಾಗಿಯೇ ಸೌಂದರ್ಯದಿಂದ ಕೂಡಿದ್ದ ನನ್ನನ್ನು ನಗರೀಕರಣದ ಹೆಸರಿನಲ್ಲಿ ಅಲ್ಲಾಡಿಸಿದರು. ಮಣ್ಣಿನ ಹಾದಿ ಮೇಲೆ ಟಾರು ಬಂತು, ಅದರ ನಂತರ ಸಿಮೆಂಟು ಬಂತು. ಮನೆಗಳು, ದೊಡ್ಡ ಕಟ್ಟಡಗಳು ಒಂದೊಂದಾಗಿ ಮೈದಳೆದವು. ನನ್ನ ವೈಶಾಲ್ಯ ಕಿರಿದಾಗುತ್ತಾ ಬಂತು.
ಕೆಲ ವರ್ಷಗಳ ಹಿಂದೆ ಆಧುನೀಕರಣದ ಹೆಸರಿನಲ್ಲಿ ನನ್ನ ಮೇಲೆ ರಸ್ತೆ ಮಾಡಿದರು. ಆಟಿಕೆಗಳನ್ನಿಟ್ಟರು. ಬಸವಣ್ಣನೂ ಬಂದು ನೆಲೆನಿಂತರು. ಹೊರ ಸೌಂದರ್ಯ ಹೆಚ್ಚು ಮಾಡಿದಂತೆಲ್ಲ ನನ್ನ ಆಂತರ್ಯದ ಸೌಂದರ್ಯ ಕುಗ್ಗುತ್ತಾ ಹೋಯಿತು.
ನನ್ನ, ಮಣ್ಣಿನ ಒಡನಾಟ ತಪ್ಪಿಸಿ ಅಡ್ಡಲಾಗಿ ಕಲ್ಲುಗಳನ್ನಿಟ್ಟರು, ಸಿಮೆಂಟ್ ಗೋಡೆ ಕಟ್ಟಿದರು. ಇಲ್ಲೇ, ಕಾಲ ಬುಡದಲ್ಲಿ ಅವರ್ಯಾರೊ ಕಟ್ಟಡ ಕಟ್ಟಿಕೊಂಡ. ಕೈ ಕತ್ತರಿಸಿ ಉದ್ಯಾನ ಸೃಷ್ಟಿಸಿದರು. ನನ್ನ ಗಡಿ ಈಗ ನನಗೇ ಗೊತ್ತಿಲ್ಲ. ಎಲ್ಲೋ ಒಂದಿಷ್ಟು ಕಡೆ ಜೀವ ಉಳಿದಿದೆ. ಉಸಿರಾಡುತ್ತಿರುವೆ ಅಷ್ಟೇ.
ಮಳೆಗಾಲದಲ್ಲಿ ಸಹಜವಾಗಿಯೇ ಮೈದುಂಬುತ್ತಿದ್ದೆ. ಜೀವಂತಿಕೆ ಪಡೆಯುತ್ತಿದೆ. ನನ್ನ ಮಕ್ಕಳಂತಿರುವ ಮೀನುಗಳು, ಕಪ್ಪೆಗಳು, ಮಿಡತೆಗಳು, ಹಾವುಗಳು, ಹತ್ತಿರದ ನೆಂಟರಾದ ಪಕ್ಷಿಗಳ ದಾಹ ನೀಗಿಸುತ್ತಿದ್ದೆ. ಈಗೀಗ ಆ ಶಕ್ತಿ ನನ್ನಲ್ಲಿ ಇಲ್ಲ. ಬಹುತೇಕ ಸೊರಗಿರುವೆ. ನನ್ನ ವೇದನೆಯೇ ನನಗಾಗಿರುವಾಗ ಅಲ್ಯಾರೊ ಒಬ್ಬ ಕಸ ಎಸೆದ, ಇಲ್ಲೊಬ್ಬ ಮಲ–ಮೂತ್ರ ವಿಸರ್ಜಿಸಿದ, ವಿಷಕಾರಿ ಕೊಳಚೆಯೂ ನನ್ನೊಡಲ ಸೇರಿಯಾಯಿತು. ಇನ್ನೆಷ್ಟು ಹಾಳು ಮಾಡುವುದು ಬಾಕಿ ಇದೆ...?
ಬೇರೆಯವರ ದಾಹ ನೀಗಿಸುತ್ತಿದ್ದ ನನಗೆ ಈಗ ವಿಪರೀತ ಬಾಯಾರಿಕೆ. ಮಳೆರಾಯ ಸುರಿಸುತ್ತಿರುವುದು ಗುಟುಕಷ್ಟೇ. ಏನಕ್ಕೂ ಸಾಲುತ್ತಿಲ್ಲ. ತುಂಗಭದ್ರೆಯ ನಿರೀಕ್ಷೆಯಲ್ಲಿದ್ದೇನೆ. ಕೃತಕವಾಗಿಯಾದರೂ ಜೀವಂತಿಕೆ ಪಡೆಯಲು ಆಸೆಗಣ್ಣಿನಿಂದ ಕಾಯುತ್ತಿದ್ದೇನೆ. ಅಗೋ... ಅಲ್ಲಿ ನನ್ನ ಕಂದಮ್ಮ ಮೀನುಗಳು ಸಾಯುತ್ತಿವೆ. ಅಸಹಾಯಕನಾಗಿಬಿಟ್ಟ ಈ ‘ಭೀಷ್ಮ’...