H-1B ಸಂಗಾತಿಗಳ ಉದ್ಯೋಗ ಹಕ್ಕು ಹಿಂಪಡೆಯಲು ಪ್ರಸ್ತಾವನೆ: ಭಾರತೀಯ ಮೂಲದವರಿಗೆ ಆತಂಕ

H-1B ಸಂಗಾತಿಗಳ ಉದ್ಯೋಗ ಹಕ್ಕು ಹಿಂಪಡೆಯಲು ಪ್ರಸ್ತಾವನೆ: ಭಾರತೀಯ ಮೂಲದವರಿಗೆ ಆತಂಕ

H-1B ಸಂಗಾತಿಗಳ ಉದ್ಯೋಗ ಹಕ್ಕು ಹಿಂಪಡೆಯಲು ಪ್ರಸ್ತಾವನೆ: ಭಾರತೀಯ ಮೂಲದವರಿಗೆ ಆತಂಕ

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ‘ಎಚ್‌–1ಬಿ’ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಥವಾ ಎಚ್-4 ವೀಸಾ ಹೊಂದಿರುವವರಿಗೆ ನೀಡಲಾಗುತ್ತಿದ್ದ ಉದ್ಯೋಗ ಅನುಮತಿ(ಇಎಡಿ) ರದ್ದುಗೊಳಿಸಲು ಅಲ್ಲಿನ ಸರ್ಕಾರ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ನಿಯಮ ಜಾರಿಗೆ ಬಂದರೆ ದಶಕಕ್ಕೂ ಹೆಚ್ಚು ಕಾಲದಿಂದ ಜಾರಿಯಲ್ಲಿದ್ದ ನೀತಿ ರದ್ದಾಗಲಿದ್ದು, ಸಾವಿರಾರು ಮಂದಿ ತಮ್ಮ ಉದ್ಯೋಗ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಇದರಿಂದ ಅಲ್ಲಿರುವ ಭಾರತೀಯ ಮೂಲದ ಕುಟುಂಬಗಳು ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಲಿವೆ.

2014 ರಿಂದ 2017 ರವರೆಗಿನ ಎಚ್-4 ಉದ್ಯೋಗ ಅನುಮೋದನೆ ದತ್ತಾಂಶದ ಪ್ರಕಾರ, ಒಟ್ಟು ಇಎಡಿ ಅನುಮೋದನೆಗಳಲ್ಲಿ ಶೇ. 93 ರಷ್ಟು ಭಾರತೀಯ ನಾಗರಿಕರಿಗೆ ದೊರೆತಿದ್ದು, ಅದರಲ್ಲಿ ಶೇ. 94 ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. 2024ರ ಆರ್ಥಿಕ ವರ್ಷದ ಅಂಕಿಸಂಖ್ಯೆಗಳ ಪ್ರಕಾರ, ಒಟ್ಟು ಅನುಮೋದಿತ ಎಚ್‌–1ಬಿ ಅರ್ಜಿಗಳಲ್ಲಿ ಶೇ. 71 ರಷ್ಟು ಭಾರತೀಯರದ್ದೇ ಆಗಿರುವುದರಿಂದ, ಈ ಹೊಸ ನಿರ್ಧಾರವು ಭಾರತೀಯ ಕುಟುಂಬಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರಲಿದೆ.

ಗೃಹ ಭದ್ರತಾ ಇಲಾಖೆಯ ಪ್ರಸ್ತಾವನೆಯಲ್ಲೇನಿದೆ ?

ಗೃಹ ಭದ್ರತಾ ಇಲಾಖೆಯು 2015ರಲ್ಲಿ ಜಾರಿಗೆ ತರಲಾಗಿದ್ದ ನಿಯಮವನ್ನು ಹಿಂತೆಗೆದುಕೊಂಡು, ಸಂಗಾತಿಗಳಿಗೆ ಉದ್ಯೋಗ ಅನುಮತಿ ನೀಡದಿರುವ ತನ್ನ ಹಳೆಯ ನೀತಿಯನ್ನು ಮರುಸ್ಥಾಪಿಸಲು ಉದ್ದೇಶಿಸಿದೆ. 2017 ರಲ್ಲಿಯೂ ಸಹ ಇಂತಹದ್ದೇ ಪ್ರಸ್ತಾವನೆಯನ್ನು ತರಲಾಗಿತ್ತಾದರೂ, 2021ರಲ್ಲಿ ಅದನ್ನು ಹಿಂಪಡೆಯಲಾಗಿತ್ತು.

ಇದೀಗ ಈ ನಿಯಮವು ತಕ್ಷಣವೇ ಜಾರಿಯಾಗುವುದಿಲ್ಲ. ಪ್ರಸ್ತುತ ಇದು ಕೇವಲ ಪ್ರಸ್ತಾವನೆಯ ಹಂತದಲ್ಲಿದ್ದು, ತಕ್ಷಣವೇ ಉದ್ಯೋಗ ಅನುಮತಿ ಕೊನೆಗೊಳ್ಳುವುದಿಲ್ಲ. ಈ ಹೊಸ ನಿಯಮ ಜಾರಿಗೆ ಬರುವ ಮೊದಲು ಗೃಹ ಭದ್ರತಾ ಇಲಾಖೆಯು ಔಪಚಾರಿಕವಾಗಿ ನೋಟಿಸ್ ಪ್ರಕಟಿಸಬೇಕು. ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳಿಗೆ ಕಾಲಾವಕಾಶ ನೀಡಬೇಕು. ತದನಂತರವಷ್ಟೇ ಅಂತಿಮ ಆದೇಶ ಹೊರಡಿಸಲಾಗುತ್ತದೆ. ಅಲ್ಲಿಯವರೆಗೆ, ಇಎಡಿ ಹೊಂದಿರುವ ಎಚ್-4 ವೀಸಾ ಇರುವವರು ಪ್ರಸ್ತುತ ನಿಯಮಗಳ ಅಡಿಯಲ್ಲೇ ತಮ್ಮ ಕೆಲಸವನ್ನು ಮುಂದುವರಿಸಬಹುದಾಗಿದೆ.

ಎಚ್-4 ವೀಸಾ ಮತ್ತು ಇಎಡಿ ವ್ಯತ್ಯಾಸವೇನು?:

ಎಚ್-4 ವೀಸಾ ಎಂಬುದು ಎಚ್‌–1ಬಿ ವೀಸಾ ಹೊಂದಿರುವವರ ಸಂಗಾತಿ ಅಥವಾ ಮಕ್ಕಳು ಅಮೆರಿಕದಲ್ಲಿ ವಾಸಿಸಲು ನೀಡಲಾಗುವ ವೀಸಾವಾಗಿದೆ. ಇದರಲ್ಲಿ ನೇರವಾಗಿ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಎಚ್‌–1ಬಿ ಹೊಂದಿರುವವರು ಗ್ರೀನ್ ಕಾರ್ಡ್ ಪಡೆಯುವ ಹಂತದಲ್ಲಿದ್ದಾಗ ಮಾತ್ರ ಅವರ ಸಂಗಾತಿಯು ಉದ್ಯೋಗ ಅನುಮೋದನೆ ದಾಖಲೆ ಮೂಲಕ ಕೆಲಸ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ. ಇಎಡಿ ಇಲ್ಲದಿದ್ದರೂ ಎಚ್-4 ವೀಸಾ ಹೊಂದಿರುವವರು ಅಮೆರಿಕದಲ್ಲಿ ವಾಸಿಸಲು, ಬ್ಯಾಂಕ್ ಖಾತೆ ತೆರೆಯಲು ಹಾಗೂ ಚಾಲನಾ ಪರವಾನಗಿ ಪಡೆಯಲು ಅವಕಾಶವಿರುತ್ತದೆ.

ಎಚ್‌–1ಬಿ ವೀಸಾ ಮೇಲಿನ ಇತರ ಕಠಿಣ ನಿಯಮಗಳು:

ಎಚ್-4 ಇಎಡಿ ರದ್ದು ಪ್ರಸ್ತಾವನೆ ಮಾತ್ರವಲ್ಲದೆ, ಎಚ್‌–1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಅಮೆರಿಕ ಸರ್ಕಾರ ಮುಂದಾಗಿದೆ. ಹೊಸ ಎಚ್‌–1ಬಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳ ಮೇಲೆ $103,265 (ಸುಮಾರು ₹86 ಲಕ್ಷ) ಶುಲ್ಕ ವಿಧಿಸಲು ಪ್ರಸ್ತಾಪನೆ ಸಲ್ಲಿಸಲಾಗಿದೆ. ಉದ್ಯೋಗ ಕಳೆದುಕೊಂಡಾಗ ಹೊಸ ಉದ್ಯೋಗದಾತರನ್ನು ಹುಡುಕಿಕೊಳ್ಳಲು ಎಚ್‌–1ಬಿ ಉದ್ಯೋಗಿಗಳಿಗೆ ಪ್ರಸ್ತುತ ನೀಡಲಾಗುವ 60 ದಿನಗಳ ಕಾಲಾವಕಾಶವನ್ನು ರದ್ದುಪಡಿಸುವ ಪ್ರಸ್ತಾವನೆಯನ್ನು ವೈಟ್‌ಹೌಸ್ ಪರಿಶೀಲಿಸುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ