
2,482 ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾ ಅರ್ಜಿ ಆಹ್ವಾನ: ‘ಕನ್ನಡ’ ಕಡ್ಡಾಯ
ಬ್ಯಾಂಕ್ ನೌಕರರು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದೆ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ನೀಡಲು ಮತ್ತು ಗ್ರಾಮೀಣ ಬ್ಯಾಂಕಿಂಗ್ ಸೇವೆಯನ್ನು ಬಲಪಡಿಸಲು ಬ್ಯಾಂಕ್ ಆಫ್ ಬರೋಡಾ (BOB) ಕ್ರಮ ಕೈಗೊಂಡಿದೆ.
20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ‘ಲೋಕಲ್ ಬ್ಯಾಂಕ್ ಆಫೀಸರ್’ (LBO - JMG/S-I) ವಿಭಾಗದಲ್ಲಿ ಒಟ್ಟು 2,482 ಹುದ್ದೆಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸಿದೆ.
ಬ್ಯಾಂಕ್ ಆಫ್ ಬರೋಡಾದ ಈ ಕ್ರಮದ ಭಾಗವಾಗಿ ಕರ್ನಾಟಕದಲ್ಲಿಯೂ ಕನ್ನಡ ಭಾಷೆಯ ಜ್ಞಾನವಿರುವ ಸ್ಥಳೀಯ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಅವಕಾಶ ಸಿಗಲಿದೆ. ಮಾತ್ರವಲ್ಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯರಿಗೆ ಮತ್ತು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ ಸೇರಿದಂತೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಪ್ರಾವೀಣ್ಯತೆ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಸ್ಥಳೀಯ ಮಾರುಕಟ್ಟೆಯ ಜ್ಞಾನ ಹೊಂದಿರುವವರನ್ನು ನೇಮಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು. ಈಗಿನ ನಿರ್ಧಾರದಿಂದ ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂಬಂಧ ಗಟ್ಟಿಯಾಗಲಿದೆ ಎಂದು ಬ್ಯಾಂಕ್ ಹೇಳಿದೆ.
ಆಯ್ಕೆಯಾದ ನೌಕರರು ತಮಗೆ ನಿಯೋಜನೆಯಾದ ರಾಜ್ಯದಲ್ಲಿ ಕನಿಷ್ಠ 12 ವರ್ಷಗಳ ಕಾಲ ಸೇವೆ ಸಲ್ಲಿಸುವುದು ಕಡ್ಡಾಯ ಅಥವಾ SMGS-IV ಗ್ರೇಡ್‌ಗೆ ಬಡ್ತಿ ಪಡೆಯುವವರೆಗೆ ಕಾರ್ಯನಿರ್ವಹಿಸಬೇಕು.
ಕರ್ನಾಟಕದಲ್ಲಿ 418 ಹುದ್ದೆಗಳು:
ಖಾಲಿ ಇರುವ 2,482 ಹುದ್ದೆಗಳ ಪೈಕಿ ಕರ್ನಾಟಕ ಒಂದರಲ್ಲೇ 418 ಹುದ್ದೆಗಳು ಖಾಲಿ ಇದ್ದು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಭಾಷಾ ಸಾಮರ್ಥ್ಯ ಪರೀಕ್ಷೆ (LPT): ಎಸ್ಎಸ್‌ಎಲ್‌ಸಿ ಅಥವಾ ಪಿಯುಸಿಯಲ್ಲಿ ಸ್ಥಳೀಯ ಭಾಷೆಯನ್ನು (ಕನ್ನಡ) ವಿಷಯವಾಗಿ ವ್ಯಾಸಂಗ ಮಾಡದ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (LPT) ಇರಲಿದೆ.
ವಿದ್ಯಾರ್ಹತೆ: ಯಾವುದೇ ಪದವಿ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕಿನಲ್ಲಿ ಕನಿಷ್ಠ ಒಂದು ವರ್ಷ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ
ವಯೋಮಿತಿ: 21 ರಿಂದ 30 ವರ್ಷ (ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ)
ವೇತನ ಶ್ರೇಣಿ: ₹48,480 - ₹85,920 (ಆರಂಭಿಕ ಮೂಲ ವೇತನ ₹48,480)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 7
ಬ್ಯಾಂಕ್ ಆಫ್ ಬರೋಡಾ ಹೇಳಿದ್ದೇನು?
ಸ್ಥಳೀಯ ಭಾಷೆ ಬಾರದ ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಣಕಾಸು ಸಚಿವಾಲಯವು ಸ್ಥಳೀಯ ಭಾಷಾ ಕೌಶಲ್ಯವಿರುವ ನೌಕರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರೊಂದಿಗೆ ಆಪ್ತ ಸಂಬಂಧ ಬೆಳೆಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಈ ನೂತನ ನೇಮಕ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್ ತಿಳಿಸಿದ್ದಾರೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ bankofbaroda.in ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.