
ವೇಮಗಲ್ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವದ ಪೂರ್ವಭಾವಿ ಶಾಂತಿ ಸಭೆ
ವೇಮಗಲ್: ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಈಚೆಗೆ ಗಣೇಶೋತ್ಸವದ ಪೂರ್ವಭಾವಿ ಮತ್ತು ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆ ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ‘ಗಣೇಶ ಆಚರಣೆ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕಯುಕ್ತ ಬಣ್ಣಗಳ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಕೇವಲ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು’ ಎಂದರು.
ಗಣೇಶ ಮೆರವಣಿಗೆ, ವೇದಿಕೆ ಕಾರ್ಯಕ್ರಮಗಳಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾದಲ್ಲಿ ಅನುಮತಿ ರದ್ದುಪಡಿಸಲಾಗುವುದು. ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು ಎಂದರು.
ಸಭೆಯಲ್ಲಿ ವೇಮಗಲ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಪಿ. ಮಂಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಏಜಾಜ್ ಪಾಷ, ಸಬ್‌ಇನ್‌ಸ್ಪೆಕ್ಟರ್ ಸುನೀತಾದೇವಿ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಂ. ನಾಗೇಶ್, ಸದಸ್ಯರಾದ ದೀಪಾ, ರಮೇಶ್, ಮುನಿರಾಜ್, ರಾಮು, ತಾಸುಫ್ ಖಾನ್, ತಿರುಮಳಪ್ಪ, ನಟರಾಜ್, ಸನಾವುಲ್ಲ, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.